ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕ್ಕಿಕ್ಕಿರಿದು ಸೇರಿದ್ದ ಪ್ರವಾಸಿಗರ ದಂಡು
ಚಾಮರಾಜನಗರ, ಜನವರಿ, 01: 2023ರ ವರ್ಷ ಕಾಲಿಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಸಂಭ್ರಮಾಚರಣೆಗಳು ಜೋರಾಗಿ ನಡೆದಿದ್ದು, ಪ್ರವಾಸಿ ತಾಣಗಳು ಇನ್ನು ತುಂಬಿ ತುಳುಕುತ್ತಿವೆ.
ವರ್ಷಾರಂಭ ಭಾನುವಾರವೇ ಬಂದ ಹಿನ್ನೆಲೆಯಲ್ಲಿ ರಜೆ ಜೊತೆಗೆ, ಹೊಸವರ್ಷದ ಸಂಭ್ರಮಾಚರಣೆಗೆ ಹೊಸ ಕಳೆ ಬಂದಂತಿತ್ತು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನನಾಥ ದೇವಾಲಯ, ಚಾಮರಾಜನಗರ ತಾಲೂಕಿನ ಕೆ.ಗುಡಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಜನಸಾಗರವೇ ಹರಿದುಬಂದಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರವಾಸಿಗರ ದಂಡು
ವರ್ಷದ ಕೊನೆಯ ದಿನವಾದ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಭಕ್ತರು ಚಿನ್ನದ ರಥ ಎಳೆದು ಪುನೀತರಾಗಿದ್ದು, ನೂತನ ವರ್ಷಕ್ಕೆ ವಿವಿಧ ಪ್ರಾರ್ಥನೆಗಳನ್ನು ಸಲ್ಲಿಸಿ ಮಲೆ ಮಹದೇಶ್ವರನಿಗೆ ಮಧ್ಯರಾತ್ರಿ ಜೈಕಾರ ಹಾಕಿದ್ದಾರೆ. ಇನ್ನು, ಬಿಳಿಗಿರಿರಂಗನನಾಥ ದೇವಾಲಯ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕಂತೂ ಬೈಕ್ ರೈಡರ್‌ಗಳು, ಕುಟುಂಬ ಹಾಗೂ ಸ್ನೇಹಿತರ ಗುಂಪುಗಳೇ ಸೇರಿ ನೂತನ ವರ್ಷವನ್ನು ಪ್ರಕೃತಿ ಮಡಿಲಲ್ಲಿ ಕಳೆಯುತ್ತಿದ್ದಾರೆ. ಹಾಗೆಯೇ ಕೆ.ಗುಡಿಗೂ ಸಹ ಪ್ರವಾಸಿಗರು ಇನ್ನು ಹರಿದು ಬರುತ್ತಲೇ ಇದ್ದಾರೆ.

ಮಧ್ಯರಾತ್ರಿ 1ರವರೆಗೂ ಸಂಭ್ರಮಾಚರಣೆ
ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಖಾಸಗಿ ಕ್ಲಬ್‌ವೊಂದು ಏರ್ಪಡಿಸಿದ್ದ ನೂತನ ವರ್ಷದ ಕಾರ್ಯಕ್ರಮಕ್ಕೆ ಭರಫೂರ ಪ್ರತಿಕ್ರಿಯೆ ಸಿಕ್ಕಿದೆ. ಕ್ಲಬ್‌ನಲ್ಲಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಆಗಮಿಸಿ ಪ್ರವಾಸಿಗರು ಮಧ್ಯರಾತ್ರಿ 1ರವರೆಗೂ ಹಾಡು, ನೃತ್ಯ, ಅಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿ ಗಮನ ಸೆಳೆದರು.
ಕಿಕ್ಕಿರಿದು ಆಗಮಿಸಿದ್ದ ಪ್ರವಾಸಿಗರು
ಇನ್ನು ಜಿಲ್ಲೆಯ ಪ್ರವಾಸಿ ತಾಣಗಳು ಜನರಿಂದ ಗಿಜಿಗುಡುತ್ತಿದ್ದವು. ಬಹುತೇಕ ಎಲ್ಲಾ ರೆಸಾರ್ಟ್‌ಗಳು ಪ್ರವಾಸಿಗರಿಂದ ಕಿಕ್ಕಿರುದು ತುಂಬಿದ್ದವು. ಇದರಿಂದ ಪ್ರವಾಸಿಗರು ಉಳಿದುಕೊಳ್ಳಲು ನೆಲೆ ಇಲ್ಲದೆ ಪರದಾಡುವಂತಾಯಿತು. ಚಾಮರಾಜನಗರ ತಾಲೂಕಿನ ಕೆ.ಗುಡಿ, ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ವ್ಯಾಪಾರ-ವಹಿವಾಟು ಜೋರಾಗಿಯೇ ನಡೆದಿದೆ. ಸಫಾರಿ ಮೂಲಕ ಹಣ ಕೂಡ ಹರಿದು ಬಂದಿದೆ. ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಯಿಂದ ಸಾವಿರಾರು ಮಂದಿ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.

ಜೊತೆಗೆ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಇದ್ದಾರೆ. ಎರಡು ದಿನ ರಜೆ ಇದ್ದ ಕಾರಣ ಬಂಡೀಪುರ ಸಫಾರಿಯಲ್ಲಿ 8 ಬಸ್, 5 ಕಾರು, ಮತ್ತು ಒಂದು ಕ್ಯಾಂಟರ್ ವಾಹನಗಳು ಸಂಚರಿಸಿದವು. ಕಾಡಾನೆ, ಕೋಣ, ಜಿಂಕೆ, ನವಿಲು, ಕರಡಿ ಸೇರಿದಂತೆ ಇನ್ನಿತರ ಹಲವು ಕಾಡು ಪ್ರಾಣಿಗಳು ಸಹ ಸಫಾರಿ ವೇಳೆ ಕಾಣಸಿಕ್ಕಿವೆ ಎಂದು ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ತಿಳಿಸಿದರು. ಜೊತೆಗೆ, ಸಫಾರಿಗೆ ತೆರಳಲು ಟಿಕೆಟ್ ಸಿಗದೆಯೂ ಕೂಡ ಹಲವರು ವಾಪಸ್ಸಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications