Muda Scam: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ನೀಡಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಚಾಮರಾಜನಗರ, ಆಗಸ್ಟ್, 19: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಶಾಸಕರು, ಮುಖಂಡರು, ಕಾರ್ಯಕರ್ತರು ಚಾಮರಾಜೇಶ್ವರ ದೇಗುಲದಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇನ್ನು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆ ರೀತಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.

ಈ ವೇಳೆ ಶಾಸಕರಾದ ಸಿ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಚೂಡಾ ಅಧ್ಯಕ್ಷ ಮಹಮದ್ ಆಸ್ಗರ್ ಮುನ್ನಾ ಸೇರಿದಂತೆ ಮತ್ತಿತರರು ಉಪಸ್ಥಿತರುದ್ದರು.
ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಇದೀಗ ರಾಜ್ಯದಲ್ಲಿ ಮುಡಾ ಪ್ರಕರಣದ ಭಾರೀ ಸದ್ದು ಮಾಡುತ್ತಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಇಂದು (ಆಗಸ್ಟ್ 17) ಚಿತ್ರದುರ್ಗದಲ್ಲಿ ಆಗ್ರಹಿಸಿದರು. ಅಲ್ಲದೆ ಇದೇ ವೇಳೆ ಸರ್ಕಾರದ ಅಧಿಕಾರದ ಬಗ್ಗೆಯೂ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಬಂದಾಗಿನಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಬರೀ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿದರು.
ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿದ ಮೇಲೂ ಡಿ ನೋಟಿಫಿಕೇಶನ್ ಆಗುವುದಾದರೂ ಹೇಗೆ? ಕೆಲವರಿಗೆ ಸೈಟ್ ಹಂಚಿಕೆಯಾದ ಮೇಲೆ ಮೊದಲು ಅಳಿಯನ ಹೆಸರಿಗೆ, ನಂತರ ಹೆಂಡತಿಗೆ ದಾನ ಪತ್ರ ಮಾಡಲಾಗಿದೆ. 2013ರಿಂದ 2018ರ ವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನಡೆದ ಹಗರಣಗಳ ಮುಚ್ಚಿಹಾಕಲು ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ ಎಸಿಬಿ ತಂದರು ಎಂದು ಆರೋಪ ಮಾಡಿದರು.
ಇದೀಗ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಮೇಲೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ನ್ಯಾಯ ಸಮ್ಮತವಲ್ಲ. ಅವರು ತಮ್ಮದು ಸ್ವಚ್ಛ ರಾಜಕಾರಣ ಎನ್ನುವುದಾದರೆ, ಮೊದಲು ರಾಜೀನಾಮೆ ಕೊಡಲಿ. ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡಲಿ. ಸ್ವಯಂಕೃತ ಅಪರಾಧದಿಂದ ಸರ್ಕಾರ ಹೋಗುವ ಲಕ್ಷಣಗಳಿವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ಹನುಮಂತರಾಯಪ್ಪ, ಕೆ.ಚಿದಾನಂದ, ಹೆಗ್ಗೆರೆ ಮಂಜುನಾಥ್, ರಾಜೇಂದ್ರ ಮುಂತಾದವರು ಹಾಜರಿದ್ದರು.












Click it and Unblock the Notifications