Nagamale Trekking: ನಾಗಮಲೆ ಟ್ರಕ್ಕಿಂಗ್ ನಿರ್ಬಂಧಕ್ಕೆ ಕಾರಣವೇನು? ಭಕ್ತರಿಗಾಗಿ ವಿವರ ಇಲ್ಲಿದೆ
ಚಾಮರಾಜನಗರ, ಫೆಬ್ರವರಿ 28: ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಿಂದ ನಾಗಮಲೆಗೆ ದರ್ಶನಕ್ಕೆ( ಚಾರಣಕ್ಕೆ) ಆನ್ಲೈನ್ ಬುಕಿಂಗ್ ಮಾಡಿದರಷ್ಟೇ ತೆರಳಬಹುದು, ಇಲ್ಲದಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಚಾಮರಾಜನಗರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಯುವ ಜನರಲ್ಲಿ ಇತ್ತೀಚೆಗೆ ಅರಣ್ಯ ವ್ಯಾಪ್ತಿಯ ಗಿರಿ ಶಿಖರಗಳಲ್ಲಿ ಚಾರಣ ಮಾಡುವ ಹವ್ಯಾಸ ಅಧಿಕವಾಗಿದ್ದು, ಇದು ವಾರಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯ ದಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸ್ಸೋಇಚ್ಛೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಜನರು ದಟ್ಟ ಅರಣ್ಯವಿರುವ ಗಿರಿ ಪ್ರದೇಶಗಳಿಗೆ ಪ್ರತಿದಿನವೂ ಆಗಮಿಸಿದರೆ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳು ಕಲುಷಿತಗೊಳ್ಳುವ ಅಪಾಯ ಇದೆ . ಈ ನಿಟ್ಟಿನಲ್ಲಿ ಮುಂದಿನ ಆದೇಶದವರೆಗೂ ನಾಗಮಲೆ ಅರಣ್ಯ ಪ್ರದೇಶಕ್ಕೆ ಆನ್ಲೈನ್ ಬುಕಿಂಗ್ ವ್ಯವಸ್ಥೆ ಮತ್ತು ನಿರ್ದಿಷ್ಟ ಸಂಖ್ಯೆಗೆ ಸೀಮಿತಗೊಳಿಸಿ ಪ್ರಾಮಾಣಿಕ ಕಾರ್ಯ ವಿಧಾನ (sop) ರೂಪಿಸುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಭಂಧಿಸುವಂತೆ ಸೂಚಿಸಿದೆ ಹಾಗೂ ಹಳೆಯವರು ಗೇಟ್‌ನಲ್ಲಿ ಟಿಕೆಟ್ ಪಡೆದು ನಾಗಮಲೈಗೆ ಹೋಗುವ ಜೀಪ್ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇದಲ್ಲದೇ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಬರುವ ಪಾದಯಾತ್ರೆಗಳಿಗೂ ಇಂಡಿ ಬಸಪ್ಪ ಕ್ಷೇತ್ರಗಳಿಗೂ ಅನುಮತಿ ಇಲ್ಲದೆ ತೆರಳವಂತಿಲ್ಲ. ಆದ್ದರಿಂದ ಸಾರ್ವಜನಿಕರು ಭಕ್ತರು ಹಾಗೂ ವಾಹನ ಮಾಲೀಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಅರಣ್ಯಾಧಿಕಾರಿಗಳು ಪ್ರಕಟಣೆ ಆದೇಶದಲ್ಲಿ ತಿಳಿಸಿದ್ದಾರೆ.

ಇಡೀ ರಾಜ್ಯಾದ್ಯಂತ ಗಿರೀ ಶಿಖರಗಳಿಗೆ ಚಾರಣ ಹೋಗುವವರನ್ನು ಸರ್ಕಾರವೇ ನಿಷೇಧ ಮಾಡಿದೆ. ಅದರಂತೆ ನಾಗಮಲೆ ಕ್ಷೇತ್ರಕ್ಕೆ ಜೀಪ್‌ನಲ್ಲಿ ಹೋಗುವುದನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಭಕ್ತರು ಸದ್ಯದ ಮಟ್ಟಿಗೆ ನಡೆದುಕೊಂಡು ಹೋಗಿ ಎಂದಿನಂತೆ ದರ್ಶನ ಪಡೆಯಬಹುದಾಗಿದೆ. ದೇವರ ದರ್ಶನ ಪಡೆಯಲು ಭಕ್ತರು ನಾಗಮಲೆಗೆ ತೆರಳುತ್ತಾರೆಯೇ ಹೊರತು ಯಾರೂ ಸಹ ಟ್ರಕ್ಕಿಂಗ್ ಹೆಸರಿನಲ್ಲಿ ಹೋಗುವುದಿಲ್ಲ. ಭಕ್ತರು ಜೀಪ್‌ನಲ್ಲೇ ತೆರಳಬೇಕಾಗಿದ್ದು, ಅರಣ್ಯ ಇಲಾಖೆಯ ಹೊಸ ನಿಯಮದಿಂದ ದೇವರ ದರ್ಶನಕ್ಕೆ ಬ್ರೇಕ್ ಬಿದ್ದಂತಾಗಿದೆ.
ಚಾರಣ ನಿಷೇಧದಿಂದ ತೊಳಸೀಕೆರೆ, ಪಡಿಸಲನತ್ತ, ಇಂಡಿಗನತ್ತ, ನಾಗಮಲೆ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿದೆ. ನಾಗಮಲೆ ಹೋಗುವ ಭಕ್ತರನ್ನ ನಂಬಿ ಅಂಗಡಿ, ಮುಗ್ಗಟ್ಟು ತೆರೆದಿದ್ದು, ಬಾಡಿಗೆಗೆ ಜೀಪ್ ವ್ಯವಸ್ಥೆಯನ್ನು ಸಹ ಮಾಡಿರುತ್ತಾರೆ. ಜೀಪ್‌ಗಳ ಮೂಲಕ ನಾಗಮಲೆಯತ್ತ ಜನರನ್ನು ಕರೆದುಕೊಂಡು ಹೋಗುತ್ತಿದ್ದರು. ಇದೀಗ ಚಾರಣ, ಜೀಪ್ ಸಂಚಾರ ತಾತ್ಕಾಲಿಕವಾಗಿ ನಿಷೇಧಿಸಲಾಗಿದ್ದು, ಜೀಪ್ ಚಾಲಕರು, ಭಕ್ತರು ಹಾಗೂ ವ್ಯಾಪರಸ್ಥರು ಆದೇಶ ಹಿಂಪಡೆಯುವಂತೆ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications