ಬೇಸಿಗೆಯಲ್ಲಿ ಹೊತ್ತಿ ಉರಿಯುವ ಬಂಡಿಪುರ: ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಕಟ್ಟೆಚ್ಚರ
ಮೈಸೂರು, ಫೆಬ್ರವರಿ 05: ಪ್ರತಿ ವರ್ಷವೂ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಎದೆ ಬಡಿತ ಜೋರಾಗುತ್ತದೆ. ಕಾರಣ ಎಲ್ಲಿ ಅರಣ್ಯಕ್ಕೆ ಬೆಂಕಿ ತಗಲಿ ಬಿಡುತ್ತೋ ಎಂಬ ಭಯ ಇನ್ನಿಲ್ಲದೆ ಕಾಡುತ್ತಿರುತ್ತದೆ. ಹೀಗಾಗಿಯೇ ಆರಂಭಕ್ಕೂ ಮುನ್ನವೇ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಸಾಮಾನ್ಯವಾಗಿ ಬೇಸಿಗೆ ಬಂದಾಗಲೆಲ್ಲ ಎಲ್ಲರ ಚಿತ್ತ ಬಂಡಿಪುರದತ್ತ ಹರಿಯುತ್ತದೆ. ಕಾರಣ ಅಲ್ಲಿ ಕೆಲವು ವರ್ಷಗಳ ಹಿಂದೆ ಸಂಭವಿಸಿದ ಕಾಡ್ಗಿಚ್ಚು ಪ್ರಕರಣ ಮತ್ತು ಅದರಿಂದ ಆದ ಸಜೀವ ದಹನ ಹಾಗೂ ಅರಣ್ಯನಾಶ, ಪ್ರಾಣಿ, ಪಕ್ಷಿಗಳ ಆಹುತಿಯನ್ನು ಯಾರೂ ಮರೆಯುವಂತಿಲ್ಲ. ಆದರೆ ಅಂತಹ ದುರಂತ ಮತ್ತೆಂದೂ ಆಗಬಾರದು ಎಂದು ಕಠಿಣ ಕ್ರಮ ಕೈಗೊಂಡಿರುವ ಅರಣ್ಯಾಧಿಕಾರಿಗಳು ಇತ್ತೀಚೆಗಿನ ವರ್ಷಗಳಲ್ಲಿ ಅಗ್ನಿಅನಾಹುತ ಸಂಭವಿಸದಂತೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಇನ್ನು ಬೇಸಿಗೆಯಲ್ಲಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತಂತೆ ಮಾಹಿತಿ ನೀಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಅವರು ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಂಡೀಪುರದಲ್ಲಿ ಯಾವುದೇ ಕಾಡ್ಗಿಚ್ಚು ಪ್ರಕರಣ ದಾಖಲಾಗಿಲ್ಲ. ಈ ಬಾರಿಯೂ ಬಂಡೀಪುರ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಣೆ ಮಾಡುವುದಕ್ಕೆ ಸಿಬ್ಬಂದಿಗಳು ಪಣ ತೊಟ್ಟು ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕಾಡ್ಗಿಚ್ಚು ಸಂಭವಿಸದಂತೆ ಹದ್ದಿನ ಕಣ್ಣು
ಯಾವುದೇ ಕಾಡ್ಗಿಚ್ಚು ಸಂಭವಿಸದಂತೆ ಕಾಪಾಡುವ ಸಲುವಾಗಿ ಬಂಡೀಪುರದ 13 ವಲಯಗಳಲ್ಲಿ ಸುಮಾರು 500ಫೈರ್ ವಾಚರ್ಗಳು ಹಾಗೂ ಇಲಾಖೆಯ 250ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿರುವುದಾಗಿ ತಿಳಿಸಿರುವ ಅವರು ಈಗಾಗಲೇ ಬಂಡೀಪುರ ಅರಣ್ಯದಲ್ಲಿ 2876 ಕಿ.ಮೀ. ಫೈರ್ ಲೈನ್ ನಿರ್ಮಿಸಲಾಗಿದ್ದು, ಫೈರ್ ಲೈನ್ಗಾಗಿ ತೆರವುಗೊಳಿಸಿದ್ದ ಲಂಟಾನಾ ಕಳೆಗಿಡ ಸುಡುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಬೆಂಕಿ ಪ್ರಕರಣ ತಡೆಗೆ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಕಾಡಂಚಿನ ಗ್ರಾಮಸ್ಥರು ಹಾಗೂ ಹಾಡಿ ನಿವಾಸಿಗಳು ನಮ್ಮ ಬಂಡೀಪುರ ರಕ್ಷಣೆಗೆ ಬದ್ಧವಾಗಿದ್ದು, ಇಲಾಖೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಧೂಮಪಾನ ತಡೆಗೆ ಕಟ್ಟುನಿಟ್ಟಿನ ಕ್ರಮ
ಇಷ್ಟೇ ಅಲ್ಲದೆ, ಅಗ್ನಿಶಾಮಕ ಇಲಾಖೆಯಿಂದ ಬೆಂಕಿ ನಂದಿಸುವ ವಾಹನಗಳನ್ನು ಕಾಡ್ಗಿಚ್ಚು ನಿಯಂತ್ರಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಯಾವುದಾದರೂ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡರೆ ತುರ್ತಾಗಿ ಆ ಪ್ರದೇಶಕ್ಕೆ ಬೇರೆ ಬೇರೆ ವಲಯದ ಸಿಬ್ಬಂದಿಗಳನ್ನು ಕರೆತರಲು ವಾಹನದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಬಂಡೀಪುರಕ್ಕೆ ಭೇಟಿ ನೀಡಿ ಫೈರ್ಲೈನ್ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ವಲಯದಲ್ಲೂ ಬ್ಲೋವರ್ಗಳನ್ನು ನೀಡಲಾಗಿದ್ದು, ಅದು ಬೆಂಕಿ ನಂದಿಸಲು ಸಹಕಾರಿಯಾಗಲಿದೆ. 5 ರಿಂದ 6ಮಂದಿ ಮಾಡುವ ಕೆಲಸವನ್ನು ಒಂದು ಬ್ಲೋವರ್ ಮಾಡುವುದರಿಂದ ಇದು ಬೆಂಕಿ ತಡೆಗೆ ನೆರವಾಗಲಿದೆ. ಬಂಡೀಪುರ ಅರಣ್ಯದಲ್ಲಿ ಹಾದು ಹೋಗಿರುವ ಗುಂಡ್ಲುಪೇಟೆ-ಊಟಿ ರಸ್ತೆ, ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲೂ ಕಳೆಗಿಡವನ್ನು ಸುಡಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಾರ್ಗಮಧ್ಯೆ ಧೂಮಪಾನ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಬಂಡೀಪುರ ಉಳಿಸಿ ಅಭಿಯಾನ
ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬಂಡೀಪುರ ಉಳಿಸಿ ಅಭಿಯಾನ ಆರಂಭವಾಗಿದ್ದು, ಪರಿಸರಪ್ರೇಮಿಗಳು ಬೆಂಬಲ ನೀಡುತ್ತಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಪರಿಸರ ಪ್ರೇಮಿಗಳು ಗಂಧದಗುಡಿ ಫೌಂಡೇಶನ್ ನೇತೃತ್ವದಲ್ಲಿ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿರುವುದು ವಿಶೇಷವಾಗಿದೆ.
ಪ್ರತಿಭಟನಾಕಾರರ ಆಗ್ರಹ ಏನೆಂದರೆ? ಕಾಡು ಇರುವುದು ವನ್ಯಜೀವಿಗಾಗಿ, ನಿಮ್ಮ ವಾಹನ ಸಂಚಾರಕ್ಕಾಗಿ ಅಲ್ಲ, ಮನುಷ್ಯರಿಗೆ ರಾತ್ರಿ ಹೊತ್ತು ಹೇಗೆ ನೆಮ್ಮದಿ ಬೇಕು ಹಾಗೆ ಕಾಡು ಪ್ರಾಣಿಗಳಿಗೂ ರಾತ್ರಿ ಹೊತ್ತು ನೆಮ್ಮದಿ ಬೇಕು, ಬಂಡೀಪುರದಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿಷೇಧ ಮುಂದುವರಿಯಬೇಕು. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡುವುದರಿಂದ ವನ್ಯಜೀವಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ.
ರಾತ್ರಿ ವೇಳೆ ವಾಹನ ಸಂಚಾರ ಬೇಡ
ಕಾಡು ಪ್ರಾಣಿಗಳು ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಓಡಾಡುವುದರಿಂದ ಕಾಡಿನ ರಸ್ತೆಗಳಲ್ಲಿ ರಾತ್ರಿಯ ಸಂದರ್ಭದಲ್ಲಿ ವಾಹನಗಳು ಸಂಚರಿಸಿದರೆ ಸಾಕಷ್ಟು ತೊಂದರೆಯಾಗಲಿದೆ. ಆದ್ದರಿಂದ ಬಂಡೀಪುರ ಅರಣ್ಯದ ಒಳಗೆ ರಸ್ತೆ ನಿರ್ಮಾಣ ಮಾಡಬಾರದು, ಒಂದೊಮ್ಮೆ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ಹೆಚ್ಚಿನ ಅಪಘಾತಗಳು ಸಂಭವಿಸಿ, ಕಾಡು ಪ್ರಾಣಿಗಳು ಮೃತಪಡುವ ಸಾಧ್ಯತೆ ಹೆಚ್ಚಾಗಲಿದೆ. ಆದ್ದರಿಂದ ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಾರದು ಎಂಬ ಒತ್ತಾಯವನ್ನು ಮಾಡಲಾಗುತ್ತಿದೆ. ಅದು ಏನೇ ಇರಲಿ ಬಂಡೀಪುರದ ರಕ್ಷಣೆ ಕೇವಲ ಅರಣ್ಯ ಇಲಾಖೆಯದು ಮಾತ್ರವಲ್ಲ ಪ್ರತಿಯೊಬ್ಬ ಸಾರ್ವಜನಿಕರದ್ದೂ ಆಗಿದೆ ಎಂಬುದನ್ನು ಮರೆಯಬಾರದು.












Click it and Unblock the Notifications