Get Updates
Get notified of breaking news, exclusive insights, and must-see stories!

2022ರ ಹಿನ್ನೋಟ: ಚಾಮರಾಜನಗರದಲ್ಲಿ ನಡೆದ ಸಿಹಿ-ಕಹಿ ಘಟನೆಗಳು

ಚಾಮರಾಜನಗರ, ಡಿಸೆಂಬರ್‌ 31: ಕೊರೊನಾ ಭೀತಿಯಿಂದಲೇ ಆರಂಭಗೊಂಡ 2022ರ ಇಸವಿ ಅಂತ್ಯವೂ ಕೊರೊನಾ ಮುನ್ನೆಚ್ಚರಿಕೆಯಿಂದಲೇ ಅಂತ್ಯಗೊಳ್ಳುತ್ತಿದೆ.

ಇದರ ಹೊರತಾಗಿಯೂ ಪ್ರಮುಖ ಘಟನೆ, ರಾಜಕೀಯ ಬೆಳವಣಿಗೆ ಜಿಲ್ಲೆಯಲ್ಲಿ ನಡೆದು ದೇಶದ ಗಮನ ಸೆಳೆದಿದೆ. ಹೋರಾಟಗಳು, ಗಣಿ ದುರಂತಗಳು, ಪ್ರಶಸ್ತಿ-ಪುರಸ್ಕಾರ, ಹೊಸ ಯೋಜನೆಗಳು ಜಿಲ್ಲೆಯಲ್ಲಿ ಆರಂಭಗೊಂಡಿದ್ದು, 2022ರ ಹಿನ್ನೋಟ ಇಲ್ಲಿದೆ.

ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ

ಕಾಂಗ್ರೆಸ್ ಪಕ್ಷಕ್ಕೆ ಹೊಸ ಶಕ್ತಿ ನೀಡುವ ಸಂಬಂಧ ಆರಂಭಗೊಂಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದಲೇ ಆರಂಭಗೊಂಡಿತು. ರಾಹುಲ್ ಗಾಂಧಿ ರಾಜ್ಯದ ಮೊದಲ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಯಿತು. ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಉನ್ನತ ನಾಯಕರು ಹೆಜ್ಜೆ ಹಾಕಿದರು. ಯಾತ್ರೆಯಲ್ಲೂ ಪೇ ಸಿಎಂ ಧ್ವಜ ಹಾರಾಡಿದ್ದು ವಿವಾದವಾಗಿ ಪೊಲೀಸರು ಯುವಕನೊಬ್ಬನಿಗೆ ಥಳಿಸಿದ್ದು ಸುದ್ದಿಯಾಗಿತ್ತು.

ಚಾಮರಾಜನಗರಕ್ಕೆ ಕುಮಾರಸ್ವಾಮಿ ಭೇಟಿ

ಚಾಮರಾಜನಗರಕ್ಕೆ ಕುಮಾರಸ್ವಾಮಿ ಭೇಟಿ

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆಯನ್ನು ಈ ಹಿಂದಿನ ಮಾಜಿ ಸಿಎಂ ಸಿದ್ದರಾಮಯ್ಯ ತೊಡೆದು ಹಾಕಿದ್ದರೂ ಅದಾದ ಬಳಿಕ ಮುಖ್ಯಮಂತ್ರಿಯಾದವರು ಜಿಲ್ಲೆಗೆ ಬಂದಿರಲಿಲ್ಲ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಚಾಮರಾಜನಗರಕ್ಕೆ ಆಗಮಿಸಿ ನೂರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು.

ಜೆಡಿಎಸ್‌ ವಿಚಾರದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ಭದ್ರ ನೆಲೆ ಕಂಡುಕೊಂಡಿರುವ ಹನೂರು ಕ್ಷೇತ್ರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟು ಜನತಾ ಜಲಧಾರೆ ಸಮಾವೇಶ ಮಾಡಿ, ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಜನರ ಗಮನ ಸೆಳೆದಿದ್ದರು.

ಗಣಿ ದುರಂತದಲ್ಲಿ 6 ಮಂದಿ ಸಾವು

ಗಣಿ ದುರಂತದಲ್ಲಿ 6 ಮಂದಿ ಸಾವು

ಉತ್ಕೃಷ್ಟ ಕರಿಕಲ್ಲು ಹಾಗೂ ಬಿಳಿಕಲ್ಲು ಗಣಿಗಾರಿಕೆಗೆ ಹೆಸರುವಾಸಿಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಎರಡು ಗಣಿ ದುರಂತಗಳು ನಡೆದಿದ್ದು 6 ಮಂದಿ ಮೃತಪಟ್ಟರು. ಮೊದಲಿಗೆ ಮಾರ್ಚ್‌ನಲ್ಲಿ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸಮೀಪದ ಕಲ್ಲು ಗಣಿಗಾರಿಕೆಯಲ್ಲಿ ಗುಡ್ಡ ಕುಸಿದು ಬಿಹಾರ ಮೂಲದ ಮೂವರು ಕಾರ್ಮಿಕರು ಮೃತಪಟ್ಟರು. ಎನ್‌ಡಿಆರ್ಎಫ್ ಪಡೆ 24 ಗಂಟೆಗಳ ಕಾರ್ಯಾಚರಣೆ ನಡೆಸಿ ಕಲ್ಲಿನಡಿ ಸಿಲುಕಿದ್ದ ಶವಗಳನ್ನು ಹೊರತೆಗೆದರು. ಈ ಅವಘಡದಿಂದ ಎಚ್ಚೆತ್ತುಕೊಳ್ಳದೇ ಮತ್ತೊಂದು ಅವಘಡ ಚಾಮರಾಜನಗರ ತಾಲೂಕಿನ ಬಿಸಲವಾಡಿಯಲ್ಲಿ ಡಿಸೆಂಬರ್‌ನಲ್ಲಿ ಮೂವರು ಕಾರ್ಮಿಕರು ಮೃತಪಟ್ಟರು. ಅವೈಜ್ಞಾನಿಕ, ಅಸುರಕ್ಷಿತ ಗಣಿಗಾರಿಕೆಗೆ ಅಧಿಕಾರಿಗಳ ನಿರ್ಲಕ್ಷಕ್ಕೆ 6 ಮಂದಿ ಪ್ರಾಣ ಕಳೆದುಕೊಂಡಿದ್ದು ವಿಪರ್ಯಾಸವಾಗಿದೆ.

ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆದ ಯುದ್ದದ ಬಿಸಿ ಚಾಮರಾಜನಗರ ಜಿಲ್ಲೆಗೂ ತಟ್ಟಿತು.‌ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿ ಸಿಲುಕಿಕೊಂಡ ಜಿಲ್ಲೆಯ ವಿದ್ಯಾರ್ಥಿಗಳು ಭಾರತಕ್ಕೆ ಸುರಕ್ಷಿತವಾಗಿ ವಾಪಾಸ್ಸಾಗಿ ನಿಟ್ಟುಸಿರು ಬಿಟ್ಟರು.

ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದ ರಥೋತ್ಸವ

ಜಿಲ್ಲೆಯಲ್ಲಿ ಅದ್ಧೂರಿಯಾಗಿ ನಡೆದ ರಥೋತ್ಸವ

2022ರಲ್ಲಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಕಂಡಲ್ಲೆಲ್ಲಾ ನೀರು ಎಂಬ ಪರಿಸ್ಥಿತಿಯನ್ನು ಅಸಾನಿ ಚಂಡಮಾರುತ ಸೃಷ್ಟಿಸಿತ್ತು. ಜಲ ಪ್ರವಾಹಕ್ಕೆ ಹತ್ತಾರು ಕೆರೆ ಏರಿಗಳು ಬಿರುಕು ಬಿಟ್ಟವು, ಮದುವೆ ಛತ್ರಗಳು, ಪೊಲೀಸ್ ಠಾಣೆ, ಊರುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ರೈತರು ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಯಿತು, ಮಹಾ ಮಳೆಗೆ ಅನೇಕರು ಪ್ರಾಣ ಕಳೆದುಕೊಂಡರು.

ಕೊರೊನಾ ಕರಿಛಾಯೆಯಿಂದಾಗಿ ಎರಡು ವರ್ಷ ನಡೆಯದಿದ್ದ ರಥೋತ್ಸವ, ಜಾತ್ರೆಗಳುಈ ವರ್ಷ ಅದ್ಧೂರಿಯಾಗಿ ನಡೆದವು. ರಾಜ್ಯದ ಪ್ರಮುಖ ಯಾತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ, ದೀಪಾವಳಿ ರಥೋತ್ಸವಗಳಲ್ಲಿ ಲಕ್ಷಾಂತರ ಮಂದಿ ಭಾಗಿಯಾದರು. ಚಾಮರಾಜೇಶ್ವರ ರಥೋತ್ಸವ ಕೂಡ 5 ವರ್ಷದ ಬಳಿಕ ವಿಜೃಂಭಣೆಯಿಂದ ನಡೆಯಿತು. ಬಿಳಿಗಿರಿರಂಗನಾಥ ದೇವಾಲಯವೂ ನವೀಕರಣಗೊಂಡು ರಥೋತ್ಸವ ಸಂಪನ್ನಗೊಂಡಿತು.

ಚಾಮರಾಜನಗರದಲ್ಲಿ 2022ರ ಹಿನ್ನೋಟ

ಚಾಮರಾಜನಗರದಲ್ಲಿ 2022ರ ಹಿನ್ನೋಟ

2022 ರಲ್ಲಿ ಕೆಲವು ಮನಕಲುಕಿದ ನಾಗರಿಕ‌ ಸಮಾಜ ತಲೆ ತಗ್ಗಿಸುವ ವಿಚಾರಗಳು ಜಿಲ್ಲೆಯಲ್ಲಿ ಸದ್ದು ಮಾಡಿತು.‌ ಚಾಮರಾಜನಗರದಲ್ಲಿ ಹಣದಾಸೆಯಿಂದ ತಂದೆಯೇ ಬಲವಂತವಾಗಿ ಮಗುವನ್ನು ಮಾರಾಟ ಮಾಡಿದ್ದ ಘಟನೆಯನ್ನು ಲಿಂಗತ್ವ ಅಲ್ಪಸಂಖ್ಯಾತೆ ದೀಪು ಬೆಳಕಿಗೆ ತಂದಿದ್ದರು. ಬಳಿಕ ಈ ಪ್ರಕರಣ ಸುಖಾಂತ್ಯ ಕಂಡಿತು.

ಯಳಂದೂರಿನಲ್ಲಿ ಅಲೆಮಾರಿ ಸಮುದಾಯದ ವ್ಯಕ್ತಿಯೋರ್ವ ಮೃತಪಟ್ಟ ಪತ್ನಿಯನ್ನು ಹಣ ಇಲ್ಲದೇ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ‌ ಹೆಗಲ‌ ಮೇಲೆ ಹೊತ್ತು ನಡೆದಿದ್ದು ಸುದ್ದಿಯಾಗಿತ್ತು.‌ ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.‌

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆ ನೀರು ಕುಡಿದರೆಂಬ ಕಾರಣಕ್ಕೆ ತೊಂಬೆಯನ್ನು ಖಾಲಿ ಮಾಡಿಸಿ ಗಂಜಲ ಹಾಕಿ ಶುಚಿಗೊಳಿಸಿದ್ದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು. ಬಳಿಕ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಗ್ರಾಮದ ಎಲ್ಲಾ ತೊಂಬೆಗಳಲ್ಲಿ ದಲಿತ ಯುವಕರಿಂದ ನೀರು ಕುಡಿಸಿ ಪ್ರಕರಣ ಸುಖಾಂತ್ಯ ಕಾಣುವಂತೆ ಮಾಡಿದರು.

ವನ್ಯಜೀವಿಗಳ‌ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು-ದಿಂಡಿಗಲ್ ಹಾದುಹೋಗುವ ದಿಂಬಂ ಘಟ್ಟ ಪ್ರದೇಶದಲ್ಲಿ ಮದ್ರಾಸ್ ಹೈ ಕೋರ್ಟ್ ರಾತ್ರಿ ಸಂಚಾರ ನಿಷೇಧ ಮಾಡಿತು. ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಯಾವುದೇ ಕಾರಣಕ್ಕೂ ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದೆಂದು ಸ್ಥಳೀಯರು, ಜನಪ್ರತಿನಿಧಿಗಳು ಒತ್ತಾಯಿಸಿದರು.‌ ಆದರೆ, ಪರಿಸರವಾದಿಗಳು ಹುಲಿ ಸಂರಕ್ಷಿತಾರಣ್ಯ ಮಾಡುವಂತೆ ಆಗ್ರಹಿಸಿ ತಮಿಳುನಾಡು ಸರ್ಕಾರವನ್ನು ಉದಾಹರಣೆ ನೀಡಿ ಆಕ್ರೋಶ ಹೊರಹಾಕಿದ್ದರು.

ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಚಾಮರಾಜನಗರ ಜಿಲ್ಲೆ ಆಯ್ಕೆಗೊಂಡು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಯೋಜನೆಗೆ ಚಾಲನೆ ಸಿಕ್ಕಿತು. ಕ್ರಿಕೆಟರ್ ವೇದಾ ಕೃಷ್ಣಮೂರ್ತಿ, ನಟಿ ಅಮೃತಾ ಅಯ್ಯಂಗಾರ್ ಈ‌ ಯೋಜನೆಯ ರಾಯಭಾರಿಗಳಾಗಿದ್ದಾರೆ.

2023ನ್ನು ಬರಮಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ 2022ರ ತಪ್ಪುಗಳು, ಎಡವಟ್ಟುಗಳು,‌ ನಿರ್ಲಕ್ಷ್ಯ ಮರುಕಳಿಸದೇ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿ ಜನಪರ ಕಾರ್ಯಕ್ರಮಗಳು‌ ಅನುಷ್ಠಾನಗೊಳ್ಳಲಿ ಎನ್ನುವುದು ಜಿಲ್ಲೆಯ ಜನತೆಯ ಆಶಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+