ಚಾಮರಾಜನಗರ: ಪಾಲಾರ್ ನದಿ ದಡದಲ್ಲಿ ಅರಣ್ಯ ಇಲಾಖೆ-ಬೇಟೆಗಾರರ ನಡುವೆ ಗುಂಡಿನ ಚಕಮಕಿ
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಡಿ ಪಾಲಾರ್ ಎಂಬಲ್ಲಿ ಜಿಂಕೆ ಬೇಟೆಯಾಡಿ ತೆರಳುತ್ತಿದ್ದ, ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಬೇಟೆಗಾರರು ನದಿಗೆ ಹಾರಿ ಪರಾರಿಯಾಗಿದ್ದಾರೆ.
ಚಾಮರಾಜನಗರ, ಫೆಬ್ರವರಿ 16: ಹನೂರು ತಾಲೂಕಿನ ಗೋಪಿನಾಥಂ, ಪಾಲಾರ್ ಸುತ್ತಮುತ್ತಲೂ ಕಾಡುಗಳ್ಳರು ಹಾಗೂ ಬೇಟೆಗಾರರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಆರೋಪಿಗಳನ್ನು ಬಂಧಿಸಲು ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಈ ಮಧ್ಯೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿರುವ ಆತಂಕಕಾರಿ ಘಟನೆ ಗುರುವಾರ ನಡೆದಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಡಿ ಪಾಲಾರ್ ಎಂಬಲ್ಲಿ ಜಿಂಕೆ ಬೇಟೆಯಾಡಿ ತೆರಳುತ್ತಿದ್ದ, ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು ಬೇಟೆಗಾರರು ನದಿಗೆ ಹಾರಿ ಅರಣ್ಯಾಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಬೇಟೆಗಾರರ ತಲೆ ಹಾಕಿದ್ದ ಬ್ಯಾಟರಿಗಳು ಪತ್ತೆಯಾಗಿದ್ದು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಎಸಿಎಫ್ ಅಂಕರಾಜು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಗಡಿಯಂತೆ ಪಾಲಾರ್ ನದಿ ಹರಿಯುತ್ತಿದ್ದು, ಕಾಡುಗಳ್ಳರು ತಮಿಳುನಾಡು ಭಾಗದಿಂದ ತೆಪ್ಪದ ಮೂಲಕ ರಾಜ್ಯಕ್ಕೆ ಬಂದು ಜಿಂಕೆ ಬೇಟೆಯಾಡುತ್ತಾರೆ. ಗುರುವಾರ ಗುಂಡಿನ ಚಕಮಕಿ ನಡೆಸಿರುವವರು ಗೋವಿಂದಪ್ಪಾಡಿ ಗ್ರಾಮದವರು ಎಂದು ಶಂಕಿಸಲಾಗಿದೆ.
ಬಂಡೀಪುರ ಕಾಡಿಗೆ ಬೆಂಕಿ ಇಟ್ಟಿದ್ದ ವ್ಯಕ್ತಿ ಬಂಧನ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಕುಂದುಕೆರೆ ವಲಯ ವ್ಯಾಪ್ತಿಯ ಬೂದಿಕಟ್ಟೆ ಅರಣ್ಯ ಪ್ರದೇಶದಲ್ಲಿ ಫೆಬ್ರವರಿ14ರ ಮಧ್ಯಾಹ್ನ ಕಾಡಿಗೆ ಬೆಂಕಿ ಬಿದ್ದಿದ್ದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಉಪಕಾರ ಕಾಲನಿ ಗ್ರಾಮದ ರಾಮು(32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಸುರೇಶ್ ಮತ್ತು ಹೆಗ್ಗವಾಡಿ ಗ್ರಾಮದ ದೇವಪ್ಪ ಎಂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಗುಂಡ್ಲುಪೇಟೆ ಉಪ ವಿಭಾಗದ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಬೂದಿಕಟ್ಟೆ ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 14ರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು. ಈ ಬಗ್ಗೆ ಮಾಹಿತಿ ತಿಳಿದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ತಕ್ಷಣ ರಕ್ಷಣಾ ಉಪಕರಣಗಳೊಂದಿಗೆ ದೌಡಾಯಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ನಂತರ ಜಿ.ಎಸ್.ಬೆಟ್ಟ, ಗುಂಡ್ಲುಪೇಟೆ, ಮದ್ದೂರು, ಮಳೆಹೊಳೆ ಸಿಬ್ಬಂದಿ ಬೌವರ್ ಹಾಗೂ ಇನ್ನಿತರ ಉಪಕರಣಗಳೊಂದಿಗೆ ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿದ್ದಾರೆ.

ಘಟನೆಯಲ್ಲಿ ಸುಮಾರು 2.5 ಹೇಕ್ಟರ್‌ನಷ್ಟು ಕುರುಚಲು ಕಾಡಿನಿಂದ ಕೂಡಿದ ಅರಣ್ಯ ಪ್ರದೇಶವು ಬೆಂಕಿಗಾಹುತಿಯಾಗಿದೆ, ಈ ಕುರಿತು ಕುಂದುಕೆರೆ ವಲಯದಲ್ಲಿ ಅರಣ್ಯ ಮೊಕದ್ದಮೆ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.
ಇನ್ನುಳಿದ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಬೆಂಕಿ ಇಡುವ ಪ್ರಯತ್ನ ನಡೆಸಿದರೆ ಅಂತಹ ಕಿಡಿಗೇಡಿಗಳ ಮೇಲೆ ಇಲಾಖೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹುಲಿ ಯೋಜನೆ ನಿರ್ದೇಶಕರಾದ ಡಾ.ಪಿ.ರಮೇಶ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ಬಂಧನದ ವೇಳೆ ಬಂಡೀಪುರ ಎಸಿಎಫ್ ನವೀನ್, ವಲಯ ಅರಣ್ಯಾಧಿಕಾರಿಗಳಾದ ಡಿ.ಶ್ರೀನಿವಾಸ್, ಎನ್.ಪಿ.ನವೀನ್ ಕುಮಾರ್ ಹಾಜರಿದ್ದರು.r












Click it and Unblock the Notifications