ಗುಂಡ್ಲುಪೇಟೆ: ಬೆಂಕಿಯ ಜ್ವಾಲೆಗೆ ಧಗಧಗಿಸಿದ ಗುಡ್ಡ
ಚಾಮರಾಜನಗರ, ಏಪ್ರಿಲ್, 01: ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಅನ್ಗಲ್ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಸುಮಾರು 50ರಿಂದ 60 ಹೇಕ್ಟೇರ್ ಬೆಂಕಿಗೆ ಆಹುತಿಯಾಗಿರುವ ಘಟನೆ ಸೋಮವಾರ (ಏಪ್ರಿಲ್ 01) ಸಂಜೆ ನಡೆದಿದೆ.
ಕಂದಾಯ ಭೂಮಿಗೆ ಒಳಪಡುವ ಮಲ್ಲಯ್ಯನಪುರ ಅನ್ಗಲ್ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆ ಒಣಗಿ ನಿಂತಿದ್ದ ಕುರುಚಲು ಗಿಡ, ಮರಗಳು, ಪೊದೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗುಡ್ಡದ ಮೇಲ್ಭಾಗಕ್ಕೆ ಹತ್ತಿಕೊಂಡ ಬೆಂಕಿ ಸುತ್ತಲ ಪ್ರದೇಶವನ್ನು ಆವರಿಸಿ, ಕೆಳ ಭಾಗದವರೆಗಿನ 50-60 ಹೆಕ್ಟೇರ್ ಸುಟ್ಟು ಭಸ್ಮವಾಗಿದೆ.

ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿ ಅರಿತ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಶೆಡ್‌ಗೆ ಆಕಸ್ಮಿಕ ಬೆಂಕಿ: ತಾಲೂಕಿನ ಜವನಗೊಂಡನಹಳ್ಳಿ ಹೋಬಳಿ ಓಣಿಹಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿರುವ ಘಟನೆ ಶನಿವಾರ (ಮಾರ್ಚ್ 30) ಸಂಜೆ ನಡೆದಿದೆ.
ತಾಲೂಕಿನ ಓಣಿಹಟ್ಟಿ ಗ್ರಾಮದ ಚಿತ್ತಪ್ಪ, ಶಿವಣ್ಣ, ಚಿತ್ತಯ್ಯ ಅವರಿಗೆ ಸೇರಿದ ಕುರಿಗಳು ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿವೆ. ಶನಿವಾರ ಸಂಜೆ ಸುಮಾರು 4 ಗಂಟೆ ವೇಳೆಗೆ 30*40*40 ಅಳತೆಯ ಎರಡು ಕುರಿ ಶೆಡ್‌ಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದೆ.
ಇನ್ನು ಶೆಡ್‌ನಲ್ಲಿದ್ದ 15 ಕುರಿಗಳು, 01 ಮೇಕೆ ಹಾಗೂ 20 ಕುರಿಮರಿಗಳು ಸುಟ್ಟು ಕರಕಲಾಗಿದ್ದು, ಶೆಡ್‌ನ ಮೇಲ್ಛಾವಣಿ ಮತ್ತು ಶೆಡ್ ಹಾಗೂ 10 ತೆಂಗಿನ ಮರಗಳು ಬೆಂಕಿಯಲ್ಲಿ ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೆಂಗಿನ ಮರಕ್ಕೆ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಕುರಿಗಳು ಹಾಗೂ ಕುರಿಶೆಡ್‌ಗಳು ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಪಶುವೈದ್ಯ ಡಾ.ಹುಸೇನ್, ಡೆಪ್ಯೂಟಿ ತಹಶೀಲ್ದಾರ್ ಜಗನ್ನಾಥ್, ವಿಎ ಮಂಜುನಾಥ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸರ್ಕಾರದಿಂದ ಅವರಿಗೆ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ ಎಂದರು.












Click it and Unblock the Notifications