ಗುಂಡ್ಲುಪೇಟೆ ಪೃಥ್ವಿ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಅಗ್ನಿ ಅವಘಡ

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಗುಂಡ್ಲುಪೇಟೆ, ಜನವರಿ 9: ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ನಿರ್ವಾಹಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಪಟ್ಟಣದ ಅರಳೀಕಟ್ಟೆ ಬೀದಿಯಲ್ಲಿರುವ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸುಮಾರು 24 ಮಕ್ಕಳಿದ್ದು, ವಸತಿ ಶಾಲೆಯ ಹಿಂಭಾಗದ ಹಳೆಯ ಕಟ್ಟಡದಲ್ಲಿ ಭಾನುವಾರ ರಾತ್ರಿ 8.30ರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತ್ತ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕದಳ ಧಾವಿಸಿ ಬಂದು, ಬೆಂಕಿ ನಂದಿಸಿ ಅಕ್ಕಪಕ್ಕದ ಮನೆಗಳಿಗೆ ಹರಡುವುದನ್ನು ತಪ್ಪಿಸಿದೆ. ಘಟನೆಯಲ್ಲಿ ಮರಮುಟ್ಟುಗಳು ಸುಟ್ಟುಹೋಗಿದ್ದು, ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.[ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ]

Fire accident

ಆದರೆ, ಮತ್ತೆ ಸೋಮವಾರ ಬೆಳಗಿನ ಸಮಯದಲ್ಲಿ ಬೆಂಕಿ ತಗುಲಿದ್ದು, ಈ ಪ್ರದೇಶದಲ್ಲಿ ಸಂಗ್ರಹಿಸಿದ್ದ ಮರಮುಟ್ಟುಗಳು ಬೆಂಕಿಗಾಹುತಿಯಾಗಿವೆ. ಅಕ್ಕಪಕ್ಕದ ಮನೆಯ ನಿವಾಸಿಗಳು ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಕೃತ್ಯ ಎಸಗಿದ್ದು ಯಾರು?: ಅಗ್ನಿ ಅವಘಡ ಆಕಸ್ಮಿಕವಾಗಿ ಸಂಭವಿಸಿಲ್ಲ ಯಾರೋ ಕಿಡಿಗೇಡಿಗಳ ಕೃತ್ಯ ಇದರಲ್ಲಿರುವ ಸಂಶಯವಿದೆ. ದಾನಿಗಳ ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ವಿರೂಪಾಕ್ಷ ಎಂಬುವರು ವಸತಿ ಶಾಲೆಯನ್ನು ನಡೆಸುತ್ತಿದ್ದಾರೆ. ಇಬ್ಬರು ಶಿಕ್ಷಕರು ಸೇರಿದಂತೆ 6 ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪಟ್ಟಣದ ವಕೀಲ ಸತ್ಯನಾರಾಯಣ ಎಂಬುವರು ತಮ್ಮ ಹಳೆಯ ಮನೆಯನ್ನು ಬಿಟ್ಟುಕೊಟ್ಟಿದ್ದಾರೆ.[ನಂಜನಗೂಡು ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ: ಮಹದೇವಪ್ಪ]

Fire accident

ತಾಲೂಕಿನ ವಿವಿಧ ಗ್ರಾಮಗಳು, ನೆರೆಯ ಚಾಮರಾಜನಗರ, ಯಳಂದೂರು, ಮೈಸೂರು, ದಾವಣಗೆರೆ, ಬೆಂಗಳೂರು ಸೇರಿದಂತೆ ದಿ.ಪುಟ್ಟಣ್ಣ ಕಣಗಾಲ್ ಅವರ ಸಂಬಂಧಿಕನೊಬ್ಬ ಸೇರಿದಂತೆ ಸುಮಾರು 24 ಬುದ್ಧಿಮಾಂದ್ಯರು ಈ ವಸತಿನಿಲಯದಲ್ಲಿ ಆಶ್ರಯ ಪಡೆದಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಅರಿವಿರುವ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳು ಇಲ್ಲಿಗೆ ನೀಡುವ ನೆರವಿನೊಂದಿಗೆ ಶಾಲೆಯನ್ನು ನಡೆಸಲಾಗುತ್ತಿದೆ. ಇಂಥ ಶಾಲೆಯ ಹಿಂಭಾಗದಿಂದ ಬೆಂಕಿ ಹೊತ್ತಿಕೊಳ್ಳಲು ಕಿಡಿಗೇಡಿಗಳ ಕೃತ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಟ್ಟಡದ ಮಾಲೀಕರು ದೂರು ನೀಡಿದ ನಂತರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪೃಥ್ವಿದಾಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fire accident in Prithvi mentally challenged children's school in Gundlupet taluk, Chamarajanagar district.
Please Wait while comments are loading...