ಸುಳ್ಳೇ ಬಿಜೆಪಿಯವರ ಮನೆ ದೇವರು: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಏಪ್ರಿಲ್, 12: ಗ್ಯಾರಂಟಿ ಯೋಜನೆಗೆ ಬಿಜೆಪಿ ಅವರಿಗೆ ಹೊಟ್ಟೆಯುರಿ ಉಂಟಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೊಳ್ಳೇಗಾಲದಲ್ಲಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಅವರು ಬಿಜೆಪಿಯವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಳ್ಳೇಗಾಲದ ಎಂಜಿಎಸ್‌ವಿ ಮೈದಾನದಲ್ಲಿ ನಡೆದ ಪ್ರಜಾ ಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಡವರು, ದಲಿತರು, ಹಿಂದುಳಿದ ವರ್ಗಗಳು ಕಂಡರೇ ಬಿಜೆಪಿಯವರಿಗೆ ಆಗಲ್ಲ. ಗ್ಯಾರಂಟಿ ಜಾರಿಯಿಂದ ಅವರಿಗೆ ಹೊಟ್ಟೆಯುರಿ ಉಂಟಾಗಿದೆ, ಅದಕ್ಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಮಾಡಿದ್ದ ಆರೋಪದ ವಿರುದ್ಧ ಕಿಡಿಕಾರಿದರು.

ಲೋಕಸಭಾ ಚುನಾವಣೆಯಾದ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ನಾನು ನಿಮಗೆ ಭರವಸೆ ಕೊಡುತ್ತೇನೆ, ಗ್ಯಾರಂಟಿ ಯೋಜನೆಗೆ ಎಷ್ಟೇ ಖರ್ಚಾದರೂ ಸರಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಮುಂದುವರೆಸುತ್ತೇವೆ ಎಂದರು.
ಬಿಜೆಪಿ ಅವರು ಮಾತಿಗೆ ತಪ್ಪಿ ನಡೆಯುವವರು, ಸುಳ್ಳು ಅವರ ಮನೆ ದೇವರು. ಆದರೆ, ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರ. ಬಡವರಿಗೆ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಪರ ನಿಲ್ಲುತ್ತಾರೆಂದು ಅಕ್ಕಿಯನ್ನೇ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವವರು ನರೇಂದ್ರ ಮೋದಿ, ಅವರು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ, ಸಂವಿಧಾನ ಉಳಿಯಬೇಕಾದರೇ ಕಾಂಗ್ರೆಸ್ ಗೆಲ್ಲಬೇಕು ಎಂದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಇಂದಿಗೂ ಕೂಡ ಕಪ್ಪು ಹಣ ವಾಪಾಸ್ ತಂದಿಲ್ಲ, ಮೇಕ್ ಇನ್ ಇಂಡಿಯಾ ಆಗಿಲ್ಲ. ಅಚ್ಚೇ ದಿನ್ ಬಂದಿಲ್ಲ ಎಂದು ಕಿಡಿಕಾರಿದರು.
ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ರಾಜ್ಯದ ನಾಯಕರು ಹೇಳುತ್ತಿದ್ದಾರೆ. ಇಲ್ಲಿನ ನಾಯಕರಿಗೆ ವೋಟ್ ಕೇಳುವ ನೈತಿಕತೆ ಇಲ್ಲ. ಮೋದಿ ಮುಖ ಬಿಟ್ಟು ಚುನಾವಣಾ ವಸ್ತುವಿಲ್ಲ, ತಮ್ಮ ಸಾಧನೆ ಹೇಳಿ ಅವರು ಮತ ಕೇಳುತ್ತಿಲ್ಲ. ತಾವು ಈ ಬಾರಿ ಕೆಟ್ಟದಾಗಿ ಸೋಲುತ್ತೇವೆ ಎಂದು ಹೆದರಿ ಬಿಜೆಪಿ-ಜೆಡಿಎಸ್ ಒಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಬೆಸ್ಟ್ ಫೈನಾನ್ಸ್ ಮಿನಿಸ್ಟರ್: ದೇಶದಲ್ಲೇ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಸ್ಟ್ ಫೈನಾನ್ಸ್ ಮಿನಿಸ್ಟರ್ ಎಂದು ಆಹಾರ ನಾಗರಿಕ ಮತ್ತು ಸರಬರಾಜು ಸಚಿವ ಕೆಹೆಚ್.ಮುನಿಯಪ್ಪ ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿಯ ಹಣ ಕೊಡುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ರೀಸೋರ್ಸ್‌ನಲ್ಲಿ ಹಣ ಕೊಟ್ಟಿದ್ದೀವಿ, ಅವರು ಹಣ ಕೊಟ್ಟಿಲ್ಲ. ಬರ ಪರಿಹಾರಕ್ಕೆ ದುಡ್ಡು ಕೊಡದವರು ಬೇರೆ ಹಣ ಎಲ್ಲಿಂದ ಕೊಡುತ್ತಾರೆ?. ಈ ವರ್ಷ ಹಣಕೊಟ್ಟು ಮುಂದಿನ ವರ್ಷದ ಅಭಿವೃದ್ಧಿಗೂ ಹಣ ಇಟ್ಟಿದ್ದೀವಿ ಎಂದು ಸಚಿವರು ತಿಳಿಸಿದರು.
ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿದೆ ಎಂಬ ಮೈತ್ರಿ ಅಭ್ಯರ್ಥಿ ಕಾರಜೋಳ ಹೇಳಿಕೆಗೆ ಉತ್ತರಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ಯಾವ ಗ್ಯಾರಂಟಿಯು ನಿಲ್ಲಲ್ಲ. ನಾವು ನೀಡಿರುವ ಐದು ಗ್ಯಾರಂಟಿಗಳು ಸಂಪೂರ್ಣವಾಗಿ ಐದು ವರ್ಷ ನಡೆಯುತ್ತವೆ. ಮುಂದೆ ಐದು ವರ್ಷ ನಮ್ಮ ಸರ್ಕಾರ ಬಂದರೆ ಆಗಲೂ ಗ್ಯಾರಂಟಿ ಮುಂದುವರಿಸುತ್ತೇವೆ. ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ, ನಿಲ್ಲಿಸುವ ಮಾತೇ ಇಲ್ಲ ಎಂದರು.
ಮಾದಿಗ ಸಮುದಾಯ ಉಳಿಯಲು ತಮಗೆ ಮತ ಹಾಕುವಂತೆ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮುನಿಯಪ್ಪ, ಕಾರಜೋಳ ಅವರು ಮಾದಿಗ ಸಮುದಾಯದ ಮುಖಂಡರು ಒಪ್ಪಿಕೊಳ್ಳುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ, ಕಾರಜೋಳ ಪಕ್ಷಕ್ಕೂ ತುಂಬಾ ವ್ಯತ್ಯಾಸವಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು, ಕೆಲಸ ಮಾಡಿದ ಪಕ್ಷ. ಅವರದು ಕೋಮುವಾದಿ ಪಕ್ಷವಾಗಿದೆ ಎಂದರು.
ಸಾಹುಕಾರರ ಸಾಲ ಮನ್ನಾ ಮಾಡುವ ಪಕ್ಷ ಇವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇವರು ಸಂವಿಧಾನ ಬದಲಾವಣೆ ಮಾಡುವ ಯೋಚನೆ ಮಾಡುತ್ತಿದ್ದಾರೆ. ನಾವಿದನ್ನು ರಕ್ಷಣೆ ಮಾಡುವ ಕೆಲಸ ಮಾಡುತಿದ್ದೇವೆ. ವ್ಯಕ್ತಿಗತವಾಗಿ ನಾನು ಮಾತನಾಡಲ್ಲ. ಅವರಿರುವ ಪಕ್ಷ ಒಳ್ಳೆಯದಲ್ಲ ಎಂದರು.
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಮುಖಂಡರ ಜೊತೆ ಚಿತ್ರದುರ್ಗ ನಗರದ ಎನ್.ಟಿ.ಬಿ. ಹಾಲ್ ಸಭಾಂಗಣದಲ್ಲಿ ಸಭೆ ನಡೆಸಿದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.












Click it and Unblock the Notifications