ಶತಮಾನಗಳಿಂದ ಕತ್ತಲು ತುಂಬಿದ್ದ ಪಾಲಾರ್ ಹಾಡಿವಾಸಿಗಳ ಮನೆಗಳಲ್ಲಿ ಕೊನೆಗೂ ಬೆಳಕು
ಚಾಮರಾಜನಗರ, ಮಾರ್ಚ್ 04: ಶತಮಾನಗಳಿಂದ ಕತ್ತಲು ತುಂಬಿದ್ದ ಜಿಲ್ಲೆಯ ಹಾಡಿಗಳಿಗೆ ಬೆಳಕು ನೀಡುವ ಯೋಜನೆ ಸಾಕಾರಗೊಳ್ಳುತ್ತಿದ್ದು, ಮೊದಲಿಗೆ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಾಲಾರ್ ಹಾಡಿ ಇದೀಗ ವಿದ್ಯುತ್ ಸಂಪರ್ಕ ಪಡೆಯುವ ಮೂಲಕ ಬೆಳಕು ಕಂಡಿದೆ. ಹೀಗಾಗಿ ಸದಾ ಕತ್ತಲೆಯಲ್ಲಿದ್ದ ಹಾಡಿವಾಸಿಗಳು ಬೆಳಕು ಕಂಡು ಖುಷಿಗೊಂಡಿದ್ದಾರೆ. ಇದುವರೆಗೆ ಸೀಮೆಣ್ಣೆ ದೀಪ, ಕ್ಯಾಂಡಲ್ ದೀಪದ ಬೆಳಕನ್ನು ನೋಡಿದವರು ತಮ್ಮ ಹಾಡಿಗೆ ವಿದ್ಯುದ್ದೀಪ ಬಂದ ಸಂತಸದಲ್ಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕಾಡಂಚಿನಲ್ಲಿ ವಾಸ ಮಾಡುವವರ ಬದುಕು ಇವತ್ತಿಗೂ ಹೀನಾಯವಾಗಿದೆ. ಗುಡಿಸಲಲ್ಲಿ ಬದುಕು ಕಟ್ಟಿಕೊಂಡಿರುವ ಅವರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದರು. ಇದೀಗ ಮೂಲಸೌಲಭ್ಯದಲ್ಲಿ ಅತಿ ಮುಖ್ಯವಾಗಿದ್ದ ವಿದ್ಯುತ್ ಬಂದಿರುವುದು ಸಂತಸ ಮನೆ ಮಾಡುವಂತೆ ಮಾಡಿದೆ. ಕಳೆದ ನವೆಂಬರ್ ನಲ್ಲಿ ಜಿಲ್ಲೆಯ 31 ಹಾಡಿಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೂರು ತಿಂಗಳಿನಲ್ಲಿಯೇ ಯೋಜನೆಯ ಮೊದಲ ಹಂತದಲ್ಲಿ ಕೆಲಸ ಮುಗಿದು ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗಿ ಯೋಜನೆ ಜನಕ್ಕೆ ತಲುಪಿದೆ ಎನ್ನುವುದು ಸಮಾಧಾನ ತರುವ ಸಂಗತಿಯಾಗಿದೆ.

ಜಿಲ್ಲೆಯಲ್ಲಿ ಇದೀಗ ಒಟ್ಟು 31 ಹಾಡಿಗಳಿಗೆ 42 ಕೋಟಿ ರೂ. ವೆಚ್ಚದಲ್ಲಿ 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಆರಂಭಗೊAಡಿದೆ. ಅದರಂತೆ ಮೊದಲಿಗೆ ಪಾಲಾರ್ ಹಾಡಿಗೆ ಬೆಳಕು ಬಂದಿದೆ. ಸದಾ ಹಿಂದುಳಿದ ಜಿಲ್ಲೆ ಎಂಬ ಶಾಪಕ್ಕೆ ತುತ್ತಾಗಿದ್ದ ಚಾಮರಾಜನಗರದಲ್ಲಿ ಯೋಜನೆಗಳು ಪ್ರಗತಿ ಹಂತದಲ್ಲಿ ಸಾಗುತ್ತಿರುವುದು ಜನವಲಯದಲ್ಲಿ ಅದರಲ್ಲೂ ಸೌಲಭ್ಯ ಪಡೆಯುತ್ತಿರುವ ಹಾಡಿ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಪಾಲಾರ್ ಜತೆಗೆ ಇತರೆ ಹಾಡಿಗಳಿಗೂ ವಿದ್ಯುತ್ ತ್ವರಿತ ಗತಿಯಲ್ಲಿ ಸಾಗಿದರೆ ಸರ್ಕಾರದ ಕಾರ್ಯಕ್ಕೆ ಶಹಬ್ಬಾಸ್ ಎನ್ನಬಹುದು.
ಇದೀಗ ಪಾಲಾರ್ ಹಾಡಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಚಾಲನೆ ನೀಡಿದ್ದಾರೆ. ಹಾಗೆಯೇ ಪಾಲಾರ್ ಹಾಡಿಯ ಮಾದಮ್ಮ ಅವರ ಮನೆಯಲ್ಲಿ ವಿದ್ಯುತ್ ಗುಂಡಿಯನ್ನು ಒತ್ತುವ ಮೂಲಕ ವಿದ್ಯುತ್ ಸಂಪರ್ಕ ಯೋಜನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಹಾಡಿ, ಪೋಡುಗಳ ಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಿದ್ದರು.
ನಾನು ಸಹ ಬೆಟ್ಟಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಸ್ಥಳೀಯ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಜನರಿಗೆ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ನಿರ್ಧಾರವನ್ನು ಸರ್ಕಾರ ಕೈಗೊಂಡು ಅದರಂತೆ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದು ಯಶಸ್ವಿಯಾಗಿ ಪಾಲಾರ್‌ನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾಗಿ ಹೇಳಿದ್ದಲ್ಲದೆ, ಜಿಲ್ಲೆಯ ಎಲ್ಲಾ 31 ಹಾಡಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಿದ್ದೇವೆ. ಕಾಮಗಾರಿ ನಡೆಯುತ್ತಿದ್ದು, 2 ರಿಂದ 3 ತಿಂಗಳಲ್ಲಿ ಸಂಪೂರ್ಣವಾಗಿ ಎಲ್ಲಾ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಪೂರ್ಣವಾಗಲಿದೆ ಎಂಬ ಭರವಸೆ ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರು ಮಾತನಾಡಿ 'ಅರಣ್ಯವಾಸಿಗಳು, ಕಾಡಂಚಿನ ಜನರು, ಎಲ್ಲಾ ವರ್ಗದ ಬಡವರ ಮುಖದಲ್ಲಿ ನಗು ಕಾಣಬೇಕು. ಅವರಿಗೆ ಪೂರಕವಾಗಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಅವಶ್ಯಕ ಕ್ರಮಗಳಿಗೆ ಅದ್ಯತೆ ನೀಡಿದೆ. ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಐತಿಹಾಸಿಕ ಯೋಜನೆಯಡಿ ಪಾಲಾರ್ ಹಾಡಿಯ 75 ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕವನ್ನು ಅಂಡರ್ ಗ್ರೌಂಡ್ ಕೇಬಲ್ ಮೂಲಕ ಸುರಕ್ಷಿತವಾಗಿ ಅಳವಡಿಸಲಾಗಿದೆ. ಕಾಡಿನ ಸಂರಕ್ಷಣೆ ಮಾಡುವ ಅರಣ್ಯವಾಸಿಗಳಿಗೆ ಎಲ್ಲಾ ಸವಲತ್ತುಗಳನ್ನು ತಲುಪಿಸುವುದು ಸರ್ಕಾರದ ದೃಢಸಂಕಲ್ಪವಾಗಿದೆ' ಎಂದಿದ್ದಾರೆ.












Click it and Unblock the Notifications