ಕೊಳ್ಳೇಗಾಲದಲ್ಲಿ ಕಬ್ಬು ತುಂಬಿದ ಲಾರಿಗೆ ವಿದ್ಯುತ್ ಸ್ಪರ್ಶ, ಚಾಲಕ, ಕ್ಲೀನರ್ ಸಾವು
ಚಾಮರಾಜನಗರ, ಸೆಪ್ಟೆಂಬರ್, 09: ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಕ್ಲೀನರ್ ಚಿನ್ನು ಮತ್ತು ಲಾರಿ ಚಾಲಕ ಹಾಗೂ ಮಾಲೀಕ ಪ್ರಕಾಶ್ ಮೃತಪಟ್ಟಿರುವರು ಎಂದು ಗುರುತಿಸಲಾಗಿದೆ.

ಗುಂಡಾಲ್ ಜಲಾಶಯ ಸಮೀಪದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬಿನ ಲೋಡ್ ತುಂಬಿಕೊಂಡು ತೆರಳುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದುಹೋಗಿರುವ ಹೈ ಪವರ್ ವಿದ್ಯುತ್ ತಂತಿಯು ತಗುಲಿದೆ. ಈ ವೇಳೆ ಚಿನ್ನು, ಪ್ರಕಾಶ್ ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾದರೂ ವಿಫಲವಾಗಿ ಹೈ ಪವರ್ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಲಾರಿ, ಕಾರು, ಕೇರಳ ಸಾರಿಗೆ ಬಸ್ ನಡುವೆ ಅಪಘಾತ
ಉಲ್ಲಾಳ, ಸೆಪ್ಟೆಂಬರ್, 09: ಮಿನಿ ಲಾರಿ, ಕಾರು, ಬಸ್ಸಿನ ನಡುವೆ ಸರಣಿ ಅಪಘಾತವಾದ ಸಂಭವಿಸಿದ ಘಟನೆ ಮಂಗಳೂರಿನ ಜೆಪ್ಪಿನ ಮೊಗರಿನಲ್ಲಿ ನಡೆದಿದೆ.
ಮಂಗಳೂರಿನ ಜೆಪ್ಪಿನ ಮೊಗರಿನಲ್ಲಿ ಹಠಾತ್ ಬ್ರೇಕ್ ಹಾಕಿದ ಕಾರಿಗೆ ಕೇರಳ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಮುಂದೆ ಇದ್ದ ಮಿನಿ ಲಾರಿ ನಡುವೆ ಕಾರು ಅಪ್ಪಚ್ಚಿಯಾಗಿದೆ. ಇನ್ನು ತಲಪಾಡಿ ನಿವಾಸಿ ಮಂಗಳೂರಿನ ಎಂಸಿಎಫ್ ಉದ್ಯೋಗಿ ದಿನೇಶ್ ಕಾರಿನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಅಪ್ಪಚ್ಚಿಯಾಗಿದೆ. ಉಳಿದ ವಾಹನಗಳ ಹಿಂಭಾಗಕ್ಕೆ ಹಾನಿಯಾಗಿದೆ. ವ್ಯಾಗನಾರ್ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಆತ ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಲ್ಲಾ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಭೀಕರ ಅಪಘಾತ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಎಂಬಲ್ಲಿ ಶನಿವಾರ (ಸೆಪ್ಟೆಂಬರ್ 09) ಮಧ್ಯಾಹ್ನ ನಡೆದಿದೆ ಎನ್ನಲಾಗಿದೆ. ಇನ್ನು ಈ ಅಪಘಾತದ ದೃಶ್ಯ ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications