ಕೈ-ಬಿಎಸ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ, 8 ಮಂದಿ ಗಂಭೀರ
ಚಾಮರಾಜನಗರ, ಸೆಪ್ಟೆಂಬರ್.17: ನಗರಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಬಿಎಸ್ ಪಿ ಕಾರ್ಯಕರ್ತರ ನಡುವೆ ಉಂಟಾಗಿದ್ದ ವೈಮನಸ್ಸು ಭುಗಿಲೆದ್ದು ನಡೆದ ಮಾರಾಮಾರಿಯಲ್ಲಿ ಎರಡು ಪಕ್ಷಗಳ ಎಂಟು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಭಾನುವಾರ (ಸೆ.16)ರಾಮಸಮುದ್ರದಲ್ಲಿ ನಡೆದಿದೆ.
ರಾಮಸಮುದ್ರದಲ್ಲಿ ಪಕ್ಷದ ಬಾವುಟ ಕಟ್ಟುವ ವಿಚಾರವಾಗಿ ನಗರಸಭೆ ಚುನಾವಣೆಯ ಫಲಿತಾಂಶ ದಿನದಂದು ಘರ್ಷಣೆ ನಡೆದಿತ್ತು. ಆದರೆ ಅಂದು ಮಧ್ಯ ಪ್ರವೇಶ ಮಾಡಿದ್ದ ಪೊಲೀಸರು ಗಲಾಟೆಯನ್ನು ತಣ್ಣಗೆ ಮಾಡಿ, ನಿಷೇಧಾಜ್ಞೆಯಿದೆ ಎಂದು ಸಮಾಧಾನಪಡಿಸಿದ್ದರು.
ಅಷ್ಟೇ ಅಲ್ಲ, ಸಮಸ್ಯೆಯ ಬಗ್ಗೆ ಬಡಾವಣೆಯಲ್ಲಿ ಮುಖ್ಯಸ್ಥರ ಬಳಿ ನ್ಯಾಯ ಪಂಚಾಯಿತಿ ಮೂಲಕ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಆ ನಂತರ ಅದು ಮೇಲ್ನೋಟಕ್ಕೆ ತಣ್ಣಗೆ ಆದಂತೆ ಕಂಡು ಬಂದಿತ್ತಾದರೂ ಒಳಗೊಳಗೆ ದ್ವೇಷ ಹೊಗೆಯಾಡುತ್ತಲೇ ಇತ್ತು.

ಅಂದು ನಡೆದ ಘಟನೆಯ ಸಂಬಂಧ ಭಾನುವಾರ ನ್ಯಾಯ ಪಂಚಾಯಿತಿಯಲ್ಲಿ ತಿರ್ಮಾನ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿಎಸ್ ಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದವರು ಹೊಡೆದಾಟವನ್ನು ತಡೆಯಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.
ಘಟನೆಯಲ್ಲಿ ಎರಡೂ ಕಡೆಯ ಸುಮಾರು ಎಂಟು ಮಂದಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಾಂತಿಯಿಂದ ಇರುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications