ಹನೂರು: ವೆಂಕಟರಮಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ಡಾ.ರಾಜ್ ಕುಟುಂಬ
ಚಾಮರಾಜನಗರ, ಡಿಸೆಂಬರ್, 28: ಚಿಕ್ಕ ತಿರುಪತಿ ಅಂತಲೇ ಕರೆಯುವ ಹನೂರು ತಾಲೂಕಿನ ಸಿಂಗಾನಲ್ಲೂರು ಸಮೀಪದ ಬೂದುಬಾಳು ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಇಂದು ಡಾ. ರಾಜ್‌ಕುಮಾರ್ ಕುಟುಂಬ ಭೇಟಿಕೊಟ್ಟು, ವಿಶೇಷ ಪೂಜೆ ಸಲ್ಲಿಸಿದರು.
ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಮನೆಯ ಸದಸ್ಯರೆಲ್ಲರೂ ಸೇರಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಮೂವರು ಒಟ್ಟಾಗಿ ಈ ದೇವಾಲಯಕ್ಕೆ ಬರಲು ದಿನಾಂಕವೂ ನಿಗದಿಯಾಗಿತ್ತು, ಆದರೆ ಅಷ್ಟರಲ್ಲಿ ಆಗಲೇ ಪುನೀತ್ ರಾಜ್‌ಕುಮಾರ್ ಅಸುನೀಗಿದರು. ಅಪ್ಪು ನಿಧನರಾಗಿ ಒಂದು ವರ್ಷವಾದ ನಂತರ ಇದೀಗ ಮನೆಯ ಸದಸ್ಯರೆಲ್ಲ ಮನೆದೇವರ ದರ್ಶನ ಪಡೆದಿದ್ದಾರೆ. ಹಾಗೆಯೇ ಡಾ.ರಾಜ್‌ಕುಮಾರ್ ಕುಟುಂಬದವರು ದೇವಾಲಯ ಕಂಡು ಸಂತಸ ವ್ಯಕ್ತಪಡಿದ್ದಾರೆ. ಇನ್ನು ರಾಜ್‌ಕುಮಾರ್ ಕುಟುಂಬದವರು ದೇವಾಲಯಕ್ಕೆ ಬಂದ ಮಾಹಿತಿ ತಿಳಿದ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಅಲ್ಲದೆ ರಾಜ್ ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಹರಸಾಹಸಪಟ್ಟರು.

ಆಂಜನೇಯನ ದರ್ಶನ ಪಡೆದಿದ್ದ ಮುಕೇಶ್
ಹಾಗೆಯೇ ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಾಮರಾಜನಗರದ ಹರಳುಕೋಟೆ ಆಂಜನೇಯ ದೇವಾಲಯಕ್ಕೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುಕೇಶ್ ಕುಮಾರ್ ಶಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಚಾಮರಾಜನಗರದ ಜ್ಯೋತಿಷಿಯೊಂದಿಗೆ ಹನುಮ ದೇಗುಲಕ್ಕೆ ಪತ್ನಿ ಡಿಂಪಿ ಶಾ ಅವರೊಟ್ಟಿಗೆ ಭೇಟಿಕೊಟ್ಟ ನ್ಯಾಯಮೂರ್ತಿಗೆ ಅರ್ಚಕರು ಪೂರ್ಣಕುಂಭ ಸ್ವಾಗತ ಕೋರಿದ್ದರು. ಬಳಿಕ, ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಹರಳುಕೋಟೆ ಆಂಜನೇಯ ದೇವರನ್ನು ಬಬ್ರುವಾಹನ ಸ್ಥಾಪಿಸಿದನೆಂಬ ಉಲ್ಲೇಖವಿದೆ. ಈ ದೇಗುಲಕ್ಕೆ ಸುಪ್ರೀಂ ನ್ಯಾಯಾಧೀಶರುಗಳಾಗಿದ್ದ ಎಸ್.ಎ.ಬೊಬ್ಡೆ, ಎನ್.ವಿ. ರಮಣ, ರಂಜನ್ ಗೊಗೋಯ್ ಭೇಟಿ ಕೊಟ್ಟು ಪೂಜೆ ಸಲ್ಲಿಸಿರುವುದು ಇನ್ನೂ ವಿಶೇಷವಾಗಿದೆ.

ಹುಡುಗಿ ಕರುಣಿಸು ಎಂದು ಪತ್ರ ಬರೆದ ಭಕ್ತ
ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಗುರುವಾರ (ಡಿಸೆಂಬರ್ 23) ನಡೆದಿದ್ದು 7 ಲಕ್ಷ ರೂಪಾಯಿಗಳನ್ನು ಭಕ್ತರು ಶಿವನಿಗೆ ಅರ್ಪಿಸಿದ್ದರು. ಹುಂಡಿ ಎಣಿಕೆ ಕಾರ್ಯದ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿದ್ದವು. ಯೇಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗ್ಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು, " ದೇವರ ರಾಜ್ಯ ಸಮೀಪಿಸಿದೆ" ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದುಕೊಂಡಿದ್ದಾನೆ. ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದ್ದವು.












Click it and Unblock the Notifications