ಕೊರೊನಾ ಭೀತಿ: ಕೊಳ್ಳೇಗಾಲದ ಈ ಗ್ರಾಮದಲ್ಲಿ ಸ್ವಯಂ ನಿರ್ಬಂಧ
ಚಾಮರಾಜನಗರ, ಏಪ್ರಿಲ್ 29: ರಾಜ್ಯದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೆಗಾಲ ಗ್ರಾಮಸ್ಥರು ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸಭೆ ನಡೆಸಿದ ಡಾ.ಬಿ.ಆರ್ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು, ತುರ್ತು ಸಂದರ್ಭ ಹೊರತಾಗಿ ಗ್ರಾಮದಿಂದ ಯಾರೂ ಹೊರ ಹೋಗುವಂತಿಲ್ಲ. ಹಾಗೆಯೇ ಹೊರಗಿನಿಂದ ಗ್ರಾಮಕ್ಕೆ ಯಾರೂ ಬರುವಂತಿಲ್ಲ ಎಂದು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ವಲಸೆ ಹೋಗಿರುವವರು ಸದ್ಯಕ್ಕೆ ಗ್ರಾಮಕ್ಕೆ ಬರುವಂತಿಲ್ಲ ಎಂದು ಸೂಚನೆ ನೀಡಿದ್ದು, ಸಾಲ ವಸೂಲಾತಿಗೆ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಮತ್ತು ಇನ್ನಿತರ ಸಂಸ್ಥೆಗಳವರು ಕೊರೊನಾ ಕಡಿಮೆ ಆಗುವವರೆಗೂ ಬರಬಾರದು ಎಂದು ತಿಳಿಸಲಾಗಿದೆ.

ಬಡಾವಣೆಯ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಎಲ್ಲಿಯೂ ಗುಂಪು ಸೇರದೆ, ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ನ್ಯಾಯ ಪಂಚಾಯಿತಿ ಸಭೆ ನಡೆಸಿ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದು, ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಿ, ಧ್ವನಿವರ್ಧಕ ಮೂಲಕವೂ ತಿಳಿಸಿದ್ದಾರೆ.












Click it and Unblock the Notifications