ಮಕ್ಕಳಾಗಲಿಲ್ಲ ಎಂಬ ಹೊಟ್ಟೆಕಿಚ್ಚಿಗೆ ಪಕ್ಕದ್ಮನೆ ಮಗುವನ್ನು ಕೊಂದ ದುರುಳರು!
ಮೈಸೂರು, ಆಗಸ್ಟ್ 25: ತಮಗೆ ಮಕ್ಕಳಾಗಲಿಲ್ಲ ಎಂದು ದಂಪತಿಗಳಿಬ್ಬರು ಪಕ್ಕದ ಮನೆಯ ಐದು ವರ್ಷದ ಮಗುವನ್ನು ಕೊಂದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ.
Recommended Video
ಸೋಮಹಳ್ಳಿ ಗ್ರಾಮದ ಮಹೇಶ್ ಮತ್ತು ಈತನ ಹೆಂಡತಿ ರತ್ನಮ್ಮ ಇವರು ತಮ್ಮ ಪಕ್ಕದ ಮನೆಯ ಮಹದೇವಸ್ವಾಮಿ ಮತ್ತು ಗೌರಮ್ಮನ ಐದು ವರ್ಷದ ಹೆಣ್ಣುಮಗು ಮಹಾಲಕ್ಷ್ಮಿಯನ್ನು ಕರೆದೊಯ್ದು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದು ನಂತರ ಸಿಮೆಂಟ್ ಚೀಲದಲ್ಲಿ ಹಾಕಿ ದೇವರ ಕೋಣೆಯಲ್ಲಿ ಬಚ್ಚಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಗುಂಡ್ಲುಪೇಟೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಮೃತ ಮಗು ಮಹಾಲಕ್ಷ್ಮಿಯ ತಾಯಿ ಗೌರಮ್ಮ 15 ವರ್ಷಗಳ ಹಿಂದೆ ಮಹೇಶನನ್ನು ವಿವಾಹವಾಗಿದ್ದರು. ನಂತರ ಪಕ್ಕದ ಮನೆಯ ಮಹದೇವಸ್ವಾಮಿ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಈ ಕುರಿತು ನ್ಯಾಯ ಪಂಚಾಯತಿ ಆಗಿ, ಪಂಚಾಯತಿಯ ತೀರ್ಮಾನದಂತೆ ಮಹದೇವಸ್ವಾಮಿಯನ್ನು ವಿವಾಹವಾಗಿದ್ದಾಳೆ.

ಬಳಿಕ ಮಹದೇವಸ್ವಾಮಿ ಮತ್ತು ಗೌರಮ್ಮ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದ ಮೊದಲ ಮಗುವೇ ಈ ಮೃತ ಮಹಾಲಕ್ಷ್ಮಿ. ಪತ್ನಿಯಿಂದ ತ್ಯಜಿಸಲ್ಪಟ್ಟ ಮಹೇಶ್ ಕೂಡ ಕಳೆದ ಏಳು ವರ್ಷದ ಕೆಳಗೆ ಅದೇ ಗ್ರಾಮದ ರತ್ನಮ್ಮ ಎಂಬವರನ್ನು ಮದುವೆಯಾಗಿದ್ದು, ಆದರೆ ಇವರಿಗೆ ಮಕ್ಕಳಾಗಿರಲಿಲ್ಲ.

ಆದರೆ ತನ್ನ ಹೆಂಡತಿಯನ್ನು ಮದುವೆಯಾದ ಎಂದು ಮೊದಲಿನಿಂದಲೂ ಜಿದ್ದು ಸಾಧಿಸುತ್ತಿದ್ದ ಮಹೇಶ್, ಅದೇ ದ್ವೇಷದಿಂದ ಸೋಮವಾರ ಮಹದೇವಸ್ವಾಮಿ ಅವರ ಮಗುವನ್ನು ಕೊಂದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications