ಗುಂಡ್ಲುಪೇಟೆ: ಪೊಲೀಸ್ ವಾಹನದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ-BSY
ಕಾಂಗ್ರೆಸ್ ಪಕ್ಷ ಪೊಲೀಸ್ ವಾಹನದಲ್ಲಿ ಜನರಿಗೆ ಹಣ ಹಂಚುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗುಂಡ್ಲುಪೇಟೆ, ಮಾರ್ಚ್ 23: ಕಾಂಗ್ರೆಸ್ ಪಕ್ಷ ಪೊಲೀಸ್ ವಾಹನದಲ್ಲಿ ಜನರಿಗೆ ಹಣ ಹಂಚುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಲು ಪೊಲೀಸ್ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಮತದಾರರಿಗೆ ಲಂಚ ನೀಡುತ್ತಿದ್ದಾರೆ ಎಂದು ಬೆರಂಬಾಡಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಯಡಿಯೂರಪ್ಪ ಹೇಳಿದ್ದಾರೆ. ಮಾತ್ರವಲ್ಲ ಈ ಕುರಿತು ದೂರು ನೀಡುವುದಾಗಿಯೂ ಅವರು ಅಬ್ಬರಿಸಿದ್ದಾರೆ.[ಗುಂಡ್ಲುಪೇಟೆ ಉಪಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ]
ಗುಂಡ್ಲುಪೇಟೆಯೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಪರವಾಗಿ ಕೆಲವು ಪೊಲೀಸ್ ಅಧಿಕಾರಿಗಳೂ ಮತ ಪ್ರಚಾರ ಮಾಡುತ್ತಿದ್ದಾರೆ. ಮತದಾರರಿಗೆ ಹಣ ಹಂಚುತ್ತಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ತಕ್ಷಣ ಹಣ ಹಂಚಿಕೆ ಮಾಡುವುದನ್ನು ನಿಲ್ಲಿಸಬೇಕು. ಈ ಕುರಿತು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಗೆ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ.
'ಗುಂಡ್ಲುಪೇಟೆಯಲ್ಲಿ ಯಾವುದೇ ಅನುಕಂಪದ ಅಲೆಯೂ ಇಲ್ಲ. ತಮ್ಮ ಸಂಪತ್ತು ರಕ್ಷಣೆ ಮಾಡಿಕೊಳ್ಳಲು ಗೀತಾ ಮಹದೇವ ಪ್ರಸಾದ್ ಚುನಾವಣೆ ಕಣಕ್ಕಿಳಿದಿದ್ದಾರೆ ಅಷ್ಟೆ,' ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.[ಗುಂಡ್ಲುಪೇಟೆ: ಬಿಜೆಪಿಯಲ್ಲಿ ರಣೋತ್ಸಾಹ, ಕಾಂಗ್ರೆಸ್ ನಾಯಕರು ನಾಪತ್ತೆ!]
ಗೀತಾ ತಿರುಗೇಟು
ಆದರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಯಡಿಯೂರಪ್ಪನವರ ಬಳಿ ಸಾಕ್ಷ್ಯ ಇದ್ದರೆ ನೀಡಬೇಕು. ಸುಮ್ಮನೆ ಆರೋಪ ಮಾಡುವುದಲ್ಲ. ಹೀಗೆ ಆರೋಪ ಮಾಡಿದರೆ ಚುನಾವಣಾ ಆಯೋಗಕ್ಕೆ ನಾನೂ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತನಗೆ ಯಾವುದೇ ಅನುಕಂಪದ ಅಗತ್ಯವಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ತನ್ನ ಗಂಡ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಚಟುವಟಿಕೆಗಳೇ ನನ್ನ ಗೆಲುವಿಗೆ ಶ್ರೀ ರಕ್ಷೆ ಎಂದು ಅವರು ಹೇಳಿದ್ದಾರೆ.












Click it and Unblock the Notifications