ಆಸ್ತಿ ಖಾತೆಗೆ ಪ್ರಮೋದಾದೇವಿ ಪತ್ರ: ಸಿದ್ದಯ್ಯನಪುರ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಹೇಳಿದ್ದೇನು?
ಚಾಮರಾಜನಗರ, ಏಪ್ರಿಲ್ 14: ಚಾಮರಾಜನಗರದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಹಿಂದಿನಿಂದಲೂ ಈ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದವರು ಮುಂದೇನು ಎಂಬ ಭಯದಲ್ಲಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಗ್ರಾಮಸ್ಥರಿಗೆ ಸರ್ವೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈಗಾಗಲೇ ರಾಜವಂಶಸ್ಥರಿಗೆ ಸೇರಿದ ಆಸ್ತಿ ಕುರಿತಂತೆ ಸುದ್ದಿಗಳು ಗಮನಸೆಳೆಯುತ್ತಿದ್ದು, ರಾಜವಂಶಸ್ಥರಿಗೆ ಸೇರಿದ ಆಸ್ತಿಗಳು ಹಲವೆಡೆಯಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಸಿದ್ದಯ್ಯನಪುರ ಗ್ರಾಮವೂ ಒಂದಾಗಿದೆ. ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿರುವ ವಿಚಾರ ಮುನ್ನಲೆಗೆ ಬರುತ್ತಿದ್ದಂತೆಯೇ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ ಹೀಗಾಗಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ದಯ್ಯನಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ, ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಸಿದ್ದಯ್ಯನಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗದವರು 75 ವರ್ಷಗಳಿಂದಲೂ ವಾಸವಿದ್ದು, ಸುಮಾರು 1000 ಕ್ಕಿಂತಲೂ ಹೆಚ್ಚು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ 210 ಕುಟುಂಬಕ್ಕೆ ತಲಾ 4 ಎಕರೆ ಜಮೀನನ್ನು ಮಂಜೂರು ಮಾಡಿ ಕೊಟ್ಟಿದ್ದರೆ, ಜಯಚಾಮರಾಜೇಂದ್ರ ಒಡೆಯರ್ ಅವರಿಗೆ 1,035 ಎಕರೆ ಭೂಮಿ ದಾನ ನೀಡಿದ್ದಾರೆ. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ ಎನ್ನುವುದು ಗ್ರಾಮಸ್ಥರ ಹೇಳಿಕೆಯಾಗಿದೆ.
ಈ ನಡುವೆ ಮೈಸೂರಿನ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ನಮ್ಮ ಊರಿನ ಸರ್ವೇ ನಂಬರ್ಗಳನ್ನು ಉಲ್ಲೇಖಿಸಿ ಖಾತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದರಿಂದ ನಮ್ಮ ಗ್ರಾಮಸ್ಥರಿಗೆ ತೊಂದರೆ ಆಗಲಿದೆ ಎಂದು ಜಿಲ್ಲಾಧಿಕಾರಿ ಬಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಯದಿಂದಲೇ ಕಂದಾಯ ಗ್ರಾಮವನ್ನಾಗಿ ಮಾಡಿ ಎಂಬ ಬೇಡಿಕೆಯೊಂದಿಗೆ ಗ್ರಾಮದ ಯಜಮಾನರು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಲ್ಲದೆ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಗ್ರಾಮಸ್ಥರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ತಕರಾರು ಅರ್ಜಿ ಸಂಬಂಧ ಆತಂಕದಲ್ಲಿದ್ದ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದು, ತಾಲೂಕಿನ ಸಿದ್ಧಯ್ಯನಪುರ ಗ್ರಾಮದಲ್ಲಿ ಈಗಾಗಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ, ಸರ್ಕಾರಿ ಜಾಗ ಎಂದು ಖಚಿತಪಡಿಸಿಕೊಂಡು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರು ತಕರಾರು ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಹಾಗೆಯೇ ನ್ಯಾಯಾಲಯದ ಆದೇಶವಿಲ್ಲ. ಆದ್ದರಿಂದ ಗ್ರಾಮಸ್ಥರು ಯಾವುದೇ ಆತಂಕ ಪಡುವುದು ಬೇಡ. ನಿಮ್ಮ ಊರು ಕಂದಾಯ ಗ್ರಾಮಗಳಾಗುವ ಹಂತದಲ್ಲಿದೆ ಎಂದು ಹೇಳುವ ಮೂಲಕ ಧೈರ್ಯ ತುಂಬಿದ್ದಾರೆ. ಸದ್ಯ ಗ್ರಾಮಸ್ಥರಲ್ಲಿ ತುಸು ನೆಮ್ಮದಿ ಮೂಡಿದೆ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications