ಚೆನ್ನಮಲ್ಲಿಪುರ: ಗ್ಯಾರಂಟಿ ವಿಚಾರಕ್ಕೆ ಹೊಡೆದಾಡಿಕೊಂಡ "ಕೈ", ಕಮಲ ಕಾರ್ಯಕರ್ತರು, ಮುಂದೆ ಆಗಿದ್ದೇನು?, ಇಲ್ಲಿದೆ ವಿವರ
ಚಾಮರಾಜನಗರ, ಜೂನ್, 06: ಗ್ಯಾರಂಟಿ ಯೋಜನೆ ಸಂಬಂಧ ಕಾಂಗ್ರೆಸ್- ಬಿಜೆಪಿ ರಾಜ್ಯಮಟ್ಟದ ನಾಯಕರ ನಡುವೆ ಮಾತಿನ ಯುದ್ಧ ನಡೆಯುತ್ತಿದ್ದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಯಾಕೆ ಅಂತೀರಾ.. ಇಲ್ಲಿದೆ ನೋಡಿ ವಿವರ.
ಉಚಿತ ಕೊಡುಗೆಗಳ ವಿಚಾರವಾಗಿ ಗುಂಡ್ಲುಪೇಟೆಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮತ್ತೊಂದೆಡೆ ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದ ಬಿಜೆಪಿ ಕಾರ್ಯಕರ್ತ ಗೋಪಾಲಪ್ಪ ಮತ್ತು ಕಾಂಗ್ರೆಸ್ ಕಾರ್ಯಕರ್ತ ನಂದೀಶ್ ಮಧ್ಯೆ ಜಗಳವಾಗಿದೆ. ಗ್ಯಾರಂಟಿ ಭಾಗ್ಯಗಳ ಕುರಿತು ಗೋಪಾಲಪ್ಪ ಟೀಕಿಸಿದ್ದರು. ಇದನ್ನು ಪ್ರಶ್ನಿಸಿದ ನಂದೀಶ್ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಗೋಪಾಲಪ್ಪ ಅವರ ಮಗ ಮನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಂದೀಶ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮತ್ತೊಂದೆಡೆ ಗೋಪಾಲಪ್ಪ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ಗೋಪಾಲಪ್ಪ ಹಾಗೂ ನಂದೀಶ್ ದೂರು ಹಾಗೂ ಪ್ರತಿದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ಉಳ್ಳವರು ಗ್ಯಾರಂಟಿಗಳನ್ನು ತ್ಯಜಿಸಿ
ಇನ್ನು ಉಳ್ಳವರು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಭರವಸೆಗಳನ್ನು ಇಲ್ಲದವರಿಗೆ ಬಿಟ್ಟುಕೊಟ್ಟು ಅವರಿಗೆ ಸಹಾಯ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚೆಗಷ್ಟೇ ಮನವಿ ಮಾಡಿಕೊಂಡಿದ್ದರು.
ಉಳ್ಳವರು ಆರ್ಥಿಕವಾಗಿ ಹಿಂದುಳಿದವರಿಗೆ ಗ್ಯಾರಂಟಿಗಳನ್ನು ಬಿಟ್ಟುಕೊಟ್ಟರೆ, ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದಂತೆ ಆಗುತ್ತದೆ. ಇದನ್ನು ಅನುಸರಿಸಿದರೆ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರದ ಮೂಲಕ ತಿಳಿಸಿದ್ದರು.
ಅನೇಕ ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳು ಹಾಗೂ ಖಾಸಗಿ ವಲಯದಲ್ಲಿರುವವರು ಗೃಹ ಜ್ಯೋತಿಯನ್ನು ತ್ಯಜಿಸಲು ಬಯಸುವುದಾಗಿ ನನಗೆ ಪತ್ರ ಬರೆದಿದ್ದಾರೆ. ಈ ಯೋಜನೆಯಿಂದ ಹೊರಗುಳಿಯಲು ಇಚ್ಛಿಸುವವರಿಗೆ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸುವಂತೆ ಜನರನ್ನು ಕೇಳುವ ಅಭಿಯಾನವನ್ನು ಪ್ರಾರಂಭಿಸಿದಾಗ, ಅನೇಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದಿದ್ದರು.
ಅದೇ ರೀತಿ ಉಳ್ಳವರು ನಾವು ಘೋಷಿಸಿರುವ ಗ್ಯಾರಂಟಿಗಳನ್ನು ಕೈಬಿಟ್ಟು ಬಡವರಿಗೆ ಅನುವು ಮಾಡಿಕೊಡಬೇಕು. ಯಾವುದೇ ಪಕ್ಷದ ಬೆಂಬಲಿಗರಾದರೂ ಕೂಡ ನಮ್ಮ ಗ್ಯಾರಂಟಿಗಳನ್ನು ಬಿಟ್ಟುಕೊಟ್ಟು ಬಡವರಿಗೆ ಸಹಾಯ ಆಗುವಂತೆ ಮಾಡಬಹುದು ಎಂದಿದ್ದರು.
ಕಾಂಗ್ರೆಸ್ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದರಿಂದ, ಇತರೆ ಕೆಲವು ಪಕ್ಷದ ಬೆಂಬಲಿಗರು ಗ್ಯಾರಂಟಿಗಳನ್ನು ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲು ಸಿದ್ಧರಿರಬಹುದು ಎಂದು ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ರಾಜ್ಯದಲ್ಲಿ ಬಡಕುಟುಂಬದವರು ತುಂಬಾ ಜನರಿದ್ದಾರೆ. ಆದ್ದರಿಂದ ಆರ್ಥಿಕವಾಗಿ ಸದೃಢವಾಗಿರುವವರು ಗ್ಯಾರಂಟಿಗಳನ್ನು ಬಳಸದೇ ಈ ಮೂಲಕ ಬಡವರಿಗೆ ನೆರವಾಗುವುದು ತುಂಬಾ ಅಗತ್ಯವಾಗಿದೆ ಎಂದು ಮನವಿ ಮಾಡಿದ್ದರು.
ಒಟ್ಟಿನಲ್ಲಿ ಕಾಂಗ್ರೆಸ್‌ನ ಭರವಸೆಗಳ ವಿಚಾರವಾಗಿ ಈಗಾಗಲೇ ಹಲವೆಡೆ ಜನರು ಮತ್ತು ಬೆಸ್ಕಾಂ ಸಿಬ್ಬಂದಿಗಳ ನಡುವೆ ಘರ್ಷಣೆಗಳು ನಡೆದಿರುವ ಉದಾಹರಣೆಗಳು ಇವೆ. ಆದರೆ ಇದೀಗ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಆಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಹಾಗೆಯೇ ಇದಿನ್ನು ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ತಲುಪುತ್ತದೆಯೋ ಎನ್ನುವ ಆತಂಕ ಎಲ್ಲಾರಲ್ಲಿಯೂ ಕಾಡುತ್ತಿದೆ.












Click it and Unblock the Notifications