ಹುಲಗಿನ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷ
ಚಾಮರಾಜನಗರ ಡಿಸೆಂಬರ್ 17: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹಾಗೂ ಚಾಮರಾಜನಗರ ತಾಲೂಕಿನ ಕಿಲಗೆರೆ ಸಮೀಪವಿರುವ ಹುಲಗಿನ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.
ಬೆಟ್ಟದ ತಪ್ಪಲಿನಲ್ಲಿ ಚಿರತೆ ಓಡಾಟದಿಂದ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹೋಗುವ ಭಕ್ತಾದಿಗಳು ಹಾಗೂ ಬೆಟ್ಟದ ತಪ್ಪಲಿನಲ್ಲಿ ಜಾನುವಾರುಗಳನ್ನು ಮೇಯಿಸುವ ದನಗಾಹಿಗಳು ಭಯಭೀತರಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮಕ್ಕೆ ಹೊಂದಿಕೊಂಡಿರುವ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ಕಳೆದ ಒಂದಷ್ಟು ದಿನಗಳಿಂದ ಚಿರತೆ ಓಡಾಡುತ್ತಿದ್ದು, ಶುಕ್ರವಾರ ಸಂಜೆ ಬೆಟ್ಟಕ್ಕೆ ತೆರಳುತ್ತಿದ್ದ ಸಿಬ್ಬಂದಿಯೊಬ್ಬರ ಕಣ್ಣಿಗೆ ಕಂಡಿದೆ. ಇದಲ್ಲದೇ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಗ್ರಾಮದ ಹುಲಗಾದ್ರಿನಾಯ್ಕ ಎಂಬುವವರಿಗೆ ಸೇರಿದ ಕುರಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, ದನಗಾಹಿಗಳು ಬೆಟ್ಟದ ತಪ್ಪಲಿಗೆ ತಮ್ಮ ಜಾನುವಾರು ಮೇಯಿಸಿಕೊಂಡು ಬರಲು ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಲು ಮುಂಜಾನೆ, ರಾತ್ರಿ ವೇಳೆ ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದು, ಈಗ ಭಕ್ತರು ಭಯಭೀತರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಟ್ಟದ ತಪ್ಪಲಿನಲ್ಲಿ ಬೋನ್ ಇಟ್ಟು ಚಿರತೆಯನ್ನು ಸೆರೆಹಿಡಿಯುಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ರೈತರ ಮೇಲೆ ಕಾಡಾನೆಗಳು, ಕರಡಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಆಗಮಿಸಿ ಕೊಕ್ಕಬರೆ ಗ್ರಾಮಕ್ಕೆ ನಡೆದುಕೊಂಡು ತೆರಳುತ್ತಿದ್ದ ಪುಟ್ಟಸ್ವಾಮಿ ಎನ್ನುವವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಘಟನೆಯಲ್ಲಿ ಪುಟ್ಟಸ್ವಾಮಿ ಅವರ ಎರಡು ಕಾಲಿನ ಮೂಳೆಗಳು ಮುರಿದುಹೋಗಿದೆ. ಇನ್ನು ದನಗಳನ್ನು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ನಡೆದಿತ್ತು.












Click it and Unblock the Notifications