ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ ಮಾಡಿಸಿದ ಸವರ್ಣೀಯರು!
ಚಾಮರಾಜನಗರ, ನವೆಂಬರ್ 19: ದಲಿತ ಮಹಿಳೆಯೊಬ್ಬಳು ಟ್ಯಾಂಕ್ ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಇಡೀ ಟ್ಯಾಂಕ್ ಅನ್ನು ಖಾಲಿ ಮಾಡಿಸುವ ಮೂಲಕ ಸ್ವಚ್ಛಗೊಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕನೊಬ್ಬನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವಧುವಿನ ಕಡೆಯಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರಿನಿಂದ ಮಹಿಳೆಯು ಬಂದಿದ್ದರು. ಈ ವೇಳೆ ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಇದನ್ನು ನೋಡಿದ್ದಾರೆ. ಆ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಈ ಸಂಬಂಧ ಚಾಮರಾಜನಗರ ತಹಸಿಲ್ದಾರ್ ಬಸವರಾಜು ಅವರನ್ನು oneindia ಸಂಪರ್ಕಿಸಿದ ವೇಳೆ, ಈ ರೀತಿ ಚರ್ಚೆ ನಡೆಯುತ್ತಿದೆ. ವಿಎ ಹಾಗೂ ಆರ್ಐ ಮೂಲಕ ವರದಿ ತರಿಸಿಕೊಂಡಿದ್ದು ನಡೆದಿದೆ ಎನ್ನಲು ಈಗಲೇ ನಮ್ಮಲ್ಲಿ ಸಾಕ್ಷ್ಯಗಳಿಲ್ಲ. ಭಾನುವಾರ ಊರಿಗೆ ತೆರಳಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ನೀರು ಹರಿ ಬಿಡುತ್ತಿರುವ ವಿಡಿಯೋ ಹಾಗೂ ಅಸ್ಪೃಶ್ಯತೆ ಬಗೆಗಿನ ವಾಟ್ಸಾಪ್ ಸ್ಟೇಟಸ್ ಒಂದು ಹರಿದಾಡುತ್ತಿದೆ. ಈ ಘಟನೆ ನಿಜವೇ ಆದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸಬೇಕಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಈ ಅನಿಷ್ಟ ಪದ್ಧತಿ ಜಾರಿಯಲ್ಲಿರುವುದು ನಾಚಿಕೆಗೇಡಿನ ಸಂಗತಿಯಾಗಲಿದೆ.












Click it and Unblock the Notifications