ತೊಳಿಯೋದಕ್ಕೂ ನೀರಿರಲ್ಲ : ಟಿಶ್ಯೂ ಹಿಡಿದು ಕಾವೇರಿ ಹೋರಾಟಗಾರರ ಪ್ರತಿಭಟನೆ
ಚಾಮರಾಜನಗರ, ಅಕ್ಟೋಬರ್ 10: ಕಳೆದ 1 ತಿಂಗಳಿನಿಂದಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಇಂದು ಟಿಶ್ಯೂ ಪೇಪರ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಟಿಶ್ಯೂ ಪೇಪರ್ ಹಿಡಿದು ಮೆರವಣಿಗೆ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಕಾವೇರಿ ನೀರನ್ನು ತಮಿಳುನಾಡಿನ 3 ಬೆಳೆಗೆ ಹರಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ಕುಡಿಯಲು ನೀರಿಲ್ಲ, ತರಕಾರಿ ಬೆಳೆಗಳು ಒಣಗುತ್ತಿವೆ. ನಮ್ಮ ರೈತರು, ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ನೀರು ಹರಿಸಿದರೆ ಮುಂದೆ ಟಿಶ್ಯೂ ಪೇಪರ್‌ನ್ನೇ ಬಳಸಬೇಕಾಗುತ್ತದೆ. ಮುಖ ತೊಳೆಯಲೂ ನೀರಿರಲ್ಲ ಎಂದು ಟಿಶ್ಯೂ ಪೇಪರ್ ಹಿಡಿದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಹರಿಸಿ ಮತ್ತೇ ಮತ್ತೇ ರೈತರನ್ನು ಸಂಕಷ್ಟಕ್ಕೆ ದೂಡಬಾರದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಗಾಯದ ಮೇಲೆ ಬರೆ ಎಳೆಯುತ್ತಿದ್ದು, ವಾಸ್ತವ ಸ್ಥಿತಿ ಅರಿತು ಸಂಕಷ್ಟ ಸೂತ್ರ ಕೊಡಲಿ ಎಂದು ಹೋರಾಟಗಾರರು ಒತ್ತಾಯಿಸಿದರು.
ಇದೇ ರೀತಿ ರಾಜ್ಯಕ್ಕೆ ಅನ್ಯಾಯ ಮುಂದುವರೆದರೇ ತಮಿಳುನಾಡಿನ ಉತ್ಪನ್ನಗಳನ್ನು ಬಹಿಷ್ಕಾರ ಮಾಡುತ್ತೇವೆ. ತಮಿಳುನಾಡು ಗಡಿಯನ್ನು ಬಂದ್ ಮಾಡುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ಕೊಟ್ಟರು.

ಕಸಾಯಿಖಾನೆಗೆ ಅಕ್ರಮ ಸಾಗಾಟದ ವೇಳೆ ವಾಹನ ಪಲ್ಟಿ: ಹಸು ಸಾವು
ಚಾಮರಾಜನಗರ: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿಯಾಗಿ ಹಸು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಸಮೀಪ ನಡೆದಿದೆ.
ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು ಹಸುವೊಂದು ಮೃತಪಟ್ಟಿದೆ, ಎರಡು ಎಮ್ಮೆ, ಎಂಟು ಹಸುಗಳು ಬದುಕುಳಿದಿವೆ. ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳು ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ.
ಬದುಕುಳಿದ ರಾಸುಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೋಮವಾರ ಸಂಜೆ ಗುಂಡ್ಲುಪೇಟೆ ಪಟ್ಟಣದಲ್ಲಿ ಹಸುಗಳನ್ನು ಕದ್ದು ಕಸಾಯಿಖಾನೆಗೆ ಸಾಗಾಟ ಮಾಡುತಿದ್ದ ವೇಳೆ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ತಮಿಳುನಾಡು ಮೂಲದ ಮುರುಗೇಷನ್, ಶಬರೀಷನ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು. ಗುಂಡ್ಲುಪೇಟೆ ಮನೆಯೊಂದರ ಮುಂದೆ ಕಟ್ಟಿದ್ದ ಎರಡು ಹಸುಗಳನ್ನು ಇವರುಗಳು ಕದ್ದು ಕಸಾಯಿಖಾನೆಗೆ ಸಾಗಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸದ್ಯ, ಬಂಧಿತರಿಂದ ಎರಡು ಹಸು, ಗೂಡ್ಸ್ ವಾಹನ ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications