ತೆರೆ ಮೇಲೆ ಬರಲಿದೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಹಣ ಸಂತ್ರಸ್ತರಿಗೆ
ಚಾಮರಾಜನಗರ, ಸೆಪ್ಟೆಂಬರ್ 28: 2021ರ ಕೋವಿಡ್ 2ನೇ ಅಲೆಯಲ್ಲಿ 36 ಜನರ ಸಾವಿಗೆ ಕಾರಣವಾದ ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾ ಆಗಿ ತೆರೆಮೇಲೆ ಬರಲಿದೆ. ಈ ಹಿಂದೆ ಬೆಳಕಿನ ನಡೆಗೆ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ಮಾಪಕ ಅಜಯ್‌ಕುಮಾರ್ ಅವರು, ಈ ದುರಂತವನ್ನು ಬೆಳ್ಳಿತೆರೆ ಮೇಲೆ ತರಲು ಪ್ರಯತ್ನಿಸಿದ್ದು, ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
ಸಂತ್ರಸ್ತರ ಕುಟುಂಬಗಳ ಸಂಕಟದ ಜೊತೆಗೆ ಸರಕಾರ ಮತ್ತು ಅಧಿಕಾರಶಾಹಿಯ ಲೋಪದೋಷಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ. ಈಗಾಗಲೇ ಚಾಮರಾಜನಗರ ಆಸ್ಪತ್ರೆಯಲ್ಲಿ ಶೇ.70ಕ್ಕೂ ಹೆಚ್ಚು ಚಿತ್ರೀಕರಣ ನಡೆಸಿರುವ ಚಿತ್ರತಂಡ ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಒಂದು ಭಾಗವನ್ನು ಈ ಕುಟುಂಬಗಳಿಗೆ ಸಹಾಯ ಹಸ್ತವಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.
ನಿರ್ದೇಶಕ ಅಜಯ್ ಕುಮಾರ್ ಚಿತ್ರಕ್ಕೆ ಲಾಕ್‌ಡೌನ್ ಎಂಬ ಹೆಸರಿಟ್ಟಿದ್ದಾರೆ. ಆಕ್ಸಿಜನ್ ದುರಂತದ ನಂತರ ಹಲವು ಕುಟುಂಬಗಳು ಛಿದ್ರವಾಗಿವೆ. ತಮ್ಮ ಕುಟುಂಬದ ಆಧಾರ ಸ್ತಂಭಗಳನ್ನು ಕಳೆದುಕೊಂಡಿವೆ, ಹಾಗಾಗಿ ಚಿತ್ರದ ಲಾಭದ ಶೇ.30ರಷ್ಟನ್ನು 36 ಕುಟುಂಬಗಳಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಗಮನ ಸೆಳೆದ ಸಿನಿಮಾ ಪ್ರೋಮೋ
ಲಾಕ್‌ಡೌನ್ ಪ್ರೋಮೋ ಈಗಾಗಲೇ ಎಲ್ಲರನ್ನೂ ಸೆಳೆಯುತ್ತಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ದುರಂತವನ್ನು ವರದಿ ಮಾಡಿದ ಪತ್ರಕರ್ತರನ್ನು ಭೇಟಿ ಮಾಡಿ, ದುರಂತದ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಕಲೆ ಹಾಕಲು ಯತ್ನಿಸಿರುವುದಾಗಿ ಅಜಯ್ ಕುಮಾರ್ ಹೇಳಿದ್ದಾರೆ.

ಸರಕಾರದ ನಿರ್ಲಕ್ಷ್ಯದ ಬಗ್ಗೆ ಬೆಳಕು
ಚಾಮರಾಜನಗರ ಡಿಸಿ ಆಗಿದ್ದ ಡಾ.ಎಂ.ಆರ್.ರವಿ ಹಾಗೂ ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ದುರಂತದ ತಪ್ಪನ್ನು ಒಬ್ಬರಿಗೊಬ್ಬರ ಮೇಲೆ ಹೊರೆಸಿ ಕೆಸರು ಎರಚಾಡಿಕೊಂಡಿದ್ದರು. ಸರಕಾರದ ನಡೆಗೆ ಕೋರ್ಟ್ ಕೂಡ ಛೀಮಾರಿ ಹಾಕಿ ನ್ಯಾಯಾಂಗ ತನಿಖೆಗೆ ಆದೇಶಿಸಿ ತಂಡ ರಚಿಸಿತ್ತು. ದುರಂತ ನಡೆದು ಒಂದೂವರೆ ವರ್ಷವಾದರೂ ಇನ್ನೂ ಕೂಡ ಸಂತ್ರಸ್ತರಿಗೆ ಪರಿಹಾರ ಸಿಗದಿರುವುದು, ಮೃತರ ಸಂಖ್ಯೆ ಏರುಪೇರು ಮುಂದುವರೆದಿರುವುದು ಮತ್ತೊಂದು ವಿಪರ್ಯಾಸವಾಗಿದೆ. ತೆರೆ ಮೇಲೆ ಬರಲಿರುವ ಆಮ್ಲಜನಕ ದುರಂತದ ಚಿತ್ರ ಇವೆಲ್ಲದರ ಮೇಲೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿವೆ.

ದುರಂತಕ್ಕೆ ಕಾರಣ?
ಮೇ 2ರಂದು 2021ರಂದು ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿಂದ ಆಕ್ಸಿಜನ್ ಬರಲೇ ಇಲ್ಲ, ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ವೆಂಟಿಲೇಟರ್, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ ರೋಗಿಗಳು ಸಾವನ್ನಪ್ಪಿದ್ದರು.

ಸತ್ತವರ ಸಂಖ್ಯೆಯಲ್ಲೂ ಗೊಂದಲ
ದುರ್ಘಟನೆಯಲ್ಲಿ ಸರಕಾರದ ಅಂಕಿಅಂಶಗಳ ಪ್ರಕಾರ 24 ಮಂದಿ ಮೃತಪಟ್ಟಿದ್ದಾರೆ ಎಂದಿದೆ, ಆದರೆ ಪ್ರಕರಣದ ತನಿಖೆಗಾಗಿ ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ. ಹೈಕೋರ್ಟ್‌ನ ಸೂಚನೆಯಂತೆ, ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ಕಳೆದ ವರ್ಷದ ಜೂನ್ ತಿಂಗಳ ಆರಂಭದಲ್ಲಿ ತಲಾ 2 ಲಕ್ಷ ರೂ ಹಾಗೂ ಆಗಸ್ಟ್ ಎರಡನೇ ವಾರದಲ್ಲಿ 13 ಮಂದಿಯ ಮೇ 2ರ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯ ಅವಧಿಯಲ್ಲಿ ಮೃತಪಟ್ಟ ಕೋವಿಡ್ ರೋಗಿಗಳ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ 3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿತ್ತು.












Click it and Unblock the Notifications