ಚಾಮರಾಜನಗರ ಆಕ್ಸಿಜನ್ ದುರಂತ: ತಪ್ಪದ ಸಂತ್ರಸ್ತರ ಅಲೆದಾಟ
ಚಾಮರಾಜನಗರ, ಜುಲೈ, 04: ಮಹಾಮಾರಿ ಕೊರೊನಾದ ವೇಳೆ ಆಕ್ಸಿಜನ್ ದುರಂತ ನಡೆದು ಕುಟುಂಬದ ಆಧಾರಸ್ತಂಭ ಕಳೆದುಕೊಂಡಿದ್ದ ಸಂತ್ರಸ್ತರ ಅಲೆದಾಟ ಇನ್ನೂ ತಪ್ಪಿಲ್ಲ. ಹೊರಗುತ್ತಿಗೆ ನೌಕರಿ ಸಿಕ್ಕಿದರೂ 4 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ವರ್ಷದ ಹಿಂದೆ ನಡೆದ ಆಕ್ಸಿಜನ್ ದುರಂತ ಸಂತ್ರಸ್ಥರಿಗೆ ಇನ್ನೂ ಕೂಡ ಸರಿಯಾದ ನ್ಯಾಯ ಸಿಗದೇ, ಪರಿಹಾರ ಸಿಗದೇ ಅಲೆದಾಡುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ನೌಕರಿ ಮಾಡುತ್ತಿರುವ 11 ಮಂದಿಗೆ ಸಮಾಜ ಕಲ್ಯಾಣ ಇಲಾಖೆ ವೇತನ ಪಾವತಿ ಮಾಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಬೆಂಗಳೂರಲ್ಲಿ ಪ್ರತಿಭಟನೆ ಎಚ್ಚರಿಕೆ: ಸಂತ್ರಸ್ಥ ಕುಟುಂಬದ ಸದಸ್ಯರು ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿ, ತಮಗೆ ನ್ಯಾಯ ಸಿಗದಿದ್ದರೇ, ಕಾಯಂ ನೌಕರಿ ಕೊಡದಿದ್ದರೇ ಬೆಂಗಳೂರಿನ ಸಿಎಂ, ಡಿಸಿಎಂ ಮನೆ ಮುಂದೆ ಉಪವಾಸ ಅತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಆಕ್ಸಿಜನ್ ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ನಮ್ಮ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಸಂತ್ರಸ್ಥರು ಆಗ್ರಹಿಸಿದ್ದಾರೆ. ಇನ್ನು ಭಾರತ್ ಜೋಡೋ ಯಾತ್ರೆ ವೇಳೆ ಸಂತ್ರಸ್ಥ ಕುಟುಂಬಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಖಾಯಂ ಉದ್ಯೋಗದ ಭರವಸೆ ಕೊಟ್ಟಿದ್ದರು.
ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೂಡ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಆದರೆ, ಸರ್ಕಾರ ಬಂದು ಒಂದು ವರ್ಷವಾದರೂ ಯಾವುದೂ ಈಡೇರಿಲ್ಲ ಎಂದು ಸಂತ್ರಸ್ಥರು ಕಿಡಿಕಾರಿದರು.
ಇನ್ನು, ಸಂತ್ರಸ್ಥ ಕುಟುಂಬದ ಜೊತೆ ಎಡಿಸಿ ಗೀತಾ ಹುಡೇದಾ ಸಭೆ ನಡೆಸಿದ್ದು, ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂತ್ರಸ್ಥರಿಗೆ ಖಾಯಂ ಉದ್ಯೋಗವೂ ಇಲ್ಲದೇ, ಹೊರಗುತ್ತಿಗೆ ನೌಕರಿಗೆ ಸಂಬಳವೂ ಇಲ್ಲದೇ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಹಕ್ಕು ಪತ್ರ ವಿತರಣೆ: ಗುಂಡ್ಲುಪೇಟೆ ಪಟ್ಟಣ ವ್ಯಾಪ್ತಿಯ 27 ಮಂದಿ ಖಾಯಂ ಪೌರ ಕಾರ್ಮಿಕರಿಗೆ ಲಾಟರಿ ಎತ್ತುವ ಮೂಲಕ ನಿವೇಶನಗಳ ಹಕ್ಕು ಪತ್ರವನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಂಚಿಕೆ ಮಾಡಿದರು.
ಪುರಸಭೆ ಸಭಾ ಭವನದಲ್ಲಿ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಹಾಲಿ ಇರುವ 40 ಖಾಯಂ ಪೌರ ಕಾರ್ಮಿಕರ ಪೈಕಿ 27 ಮಂದಿಗೆ ಪಿಕೆಜಿಬಿ ಯೋಜನೆಯಡಿ, 21ನೇ ವಾರ್ಡ್‌ನ ಹುಣಸೇತೋಪು ಬಡಾವಣೆಯ ಹೊಸೂರು ರಸ್ತೆಯಲ್ಲಿ 20/30 ಅಳತೆಯಲ್ಲಿ ಗುರುತಿಸಲಾದ ನಿವೇಶನಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ಸ್ವಚ್ಛತೆ ಮಾಡಲು ಮಾತ್ರ ಸೀಮಿತವಲ್ಲ ಎಂಬುದನ್ನು ಅರಿತುಕೊಳ್ಳಬೇಕು. 27 ಮಂದಿ ಖಾಯಂ ಪೌರಕಾರ್ಮಿಕರಿಗೆ ಪುರಸಭೆಯಿಂದ ಹಂಚಿಕೆ ಮಾಡಿರುವ ನಿವೇಶನಗಳನ್ನು ಉಪಯೋಗಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಿ. ಮನೆ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಬಳಕೆ ಮಾಡುವ ವಸ್ತುಗಳು ಸಹ ಹೆಚ್ಚಾಗಿದೆ. ಆದ್ದರಿಂದ ಪಟ್ಟಣ ಸುಂದರವಾಗಲು ಇನ್ನೂ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಅಭಿವೃದ್ಧಿಗೆ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಪೌರ ಕಾರ್ಮಿಕರು ನೆನೆಪು ಮಾಡಿಕೊಳ್ಳುತ್ತಿರುವುದು ಖುಷಿಯ ಸಂಗತಿ. ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಜೊತೆಗೆ ಮುಂದಿನ ದಿನಗಳಲ್ಲಿ ನಿಮಗೆ ಸಹಕಾರ ನೀಡಲು ಸಿದ್ದನಿದ್ದೇನೆ ಎಂದು ಅಭಯ ನೀಡಿದರು.
ಈ ವೇಳೆ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ರಮೇಶ್ ಬಾಬು ಇತರರು ಹಾಜರಿದ್ದರು.












Click it and Unblock the Notifications