ಚಾಮರಾಜನಗರ; ರೈತರ ಬಗ್ಗೆ ನಿರ್ಲಕ್ಷ್ಯ, ಸಚಿವ ಸೋಮಣ್ಣನ ವಿರುದ್ಧ ಕ್ರಮಕ್ಕೆ ಪಟ್ಟು
ಚಾಮರಾಜನಗರ, ಅಕ್ಟೋಬರ್, 23: ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆ ಹಾಗೂ ರೈತರ ವಿರುದ್ಧ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಒಂದು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆತಡೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸೋಮಣ್ಣ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಿಸಿ, ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಸೋಮಣ್ಣನ ವಿರುದ್ಧ ರೈತರು ಕಿಡಿಕಾರಿದರು.
ಗುಂಡ್ಲುಪೇಟೆ: ವಿ. ಸೋಮಣ್ಣ ಕಪಾಳಮೋಕ್ಷ, ಸಚಿವರು ಹಲ್ಲೆ ಮಾಡಿಲ್ಲ ಎಂದ ಮಹಿಳೆ
ಸುಮೊಟೊ ಅಡಿ ಸಚಿವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್‌ಪಿ ಪ್ರಿಯದರ್ಶಿನಿ ಅವರಿಗೆ ರೈತರು ದೂರು ನೀಡಿದ್ದಾರೆ. ಸೋಮಣ್ಣ ವಿರುದ್ಧ ಕ್ರಮ ಕೈಗೊಳ್ಳಕು. ಐಎಂವಿ ದಂಡ ವಿಧಿಸಲು ರೈತ ಮುಖಂಡರು ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಮೇಲಾಧಿಕಾರಿಗಳಿಗೆ ದೂರನ್ನು ರವಾನಿಸಲಾಗುವುದು ಎಂದು ಪೊಲೀಸರು ರೈತರನ್ನು ಸಮಾಧಾನಪಡಿಸಿ ಪ್ರತಿಭಟನೆಯನ್ನು ಕೈ ಬಿಡಿಸಿದ್ದಾರೆ.

ಘಟನೆಯ ಸಂಪೂರ್ಣ ಹಿನ್ನೆಲೆ
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಅಕ್ಟೋಬರ್ 22ರಂದು ಸಂಜೆ ನಡೆದಿದೆ. ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೋರ್ವರು ಸಚಿವರ ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಇದೀಗ ಸ್ಪಷ್ಟನೆ ನೀಡಿದ ಮಹಿಳೆ ಕೆಂಪಮ್ಮ ನನಗೆ ಸಚಿವರು ಕಪಾಳಮೋಕ್ಷ ಮಾಡಿಲ್ಲ ಎಂದಿದ್ದಾರೆ.
ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಗೌರವ ನೀವು ಕೊಡುವು ಹೀಗೇನಾ? ಎಂದು ವಿಪಕ್ಷಗಳು ಪ್ರಶ್ನೆ ಮಾಡಿದ್ದವು.
ಸ್ಪಷ್ಟನೆ ನೀಡಿದ ಸಚಿವ ಸೋಮಣ್ಣ
ಘಟನೆ ಬಗ್ಗೆ ಮಾತನಾಡಿದ ವಿ ಸೋಮಣ್ಣ, ನಿನ್ನೆ 173 ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಇನ್ನು 9-10 ನಿವೇಶನಗಳಿದ್ದು, ಸುಮಾರು 25 ಜನರು ಅವುಗಳನ್ನು ಕೇಳುತ್ತಿದ್ದಾರೆ. ಈ ಮಹಿಳೆ ಐದಾರು ಬಾರಿ ಕಾಲಿಗೆ ನಮಸ್ಕಾರ ಮಾಡಿದರು. ನಾಲ್ಕೂವರೆ ಸಾವಿರ ರೂಪಾಯಿ ಯಾರಿಗೋ ಕೊಟ್ಟಿದ್ದೀನಿ ಅಂದರು. ಆ ವೇಳೆ ನಾನೇ ಹಣ ನೀಡಿದೆ. ನಾನು ಎಲ್ಲಾ ಹೆಣ್ಣು ಮಕ್ಕಳನ್ನು ಸೋದರಿಯ ಭಾವನೆಯಲ್ಲಿ ನೋಡುತ್ತೇನೆ. ಒಂದು ವೇಳೆ ಈ ಘಟನೆ ನಡೆದಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ಹೊಡೆದಿಲ್ಲ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದರು.

ಸಚಿವರು ಹಲ್ಲೆ ಮಾಡಿಲ್ಲ ಎಂದ ಮಹಿಳೆ
ಇದೇ ವೇಳೆ ಮಾತನಾಡಿದ ಮಹಿಳೆ, ನನ್ನ ಮೇಲೆ ಹಲ್ಲೆ ಆಗಿಲ್ಲ. ನಾನು ಕಾಲಿಗೆ ನಮಸ್ಕಾರ ಮಾಡಲು ಹೋದಾಗ ಸಚಿವರು ತಡೆದರು. ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ನನಗೆ ಸಚಿವರು ಹೊಡೆದಿಲ್ಲ, ತಾನು ಭಾವುಕಳಾದಾಗ ಸಚಿವ ಸೋಮಣ್ಣ ನನ್ನನ್ನು ಸಮಾಧಾನಪಡಿಸಿದರು. ಪದೇಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಿಳಿಸಿದರು. ಆ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಭಾವುಕಳಾದೆ. ತಕ್ಷಣವೇ ಸಚಿವರು ಕೆಂಪಮ್ಮನನ್ನು ಸಮಾಧಾನಪಡಿಸಿ ನಿನಗೆ ವಸತಿ ಕಲ್ಪಿಸಿ ಕೊಡುತ್ತೇನೆ ಎಂದು ಸೂಚಿಸಿದರು. ಅವರು ತನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿಕೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications