ಚಾಮರಾಜನಗರದಲ್ಲಿಯೂ ಭತ್ತ ಕಟಾವು ಸಮಸ್ಯೆ: ಸಕಾಲದಲ್ಲಿ ಯಂತ್ರ ಸಿಗದೇ ರೈತರ ಪರದಾಟ
ಚಾಮರಾಜನಗರ, ಡಿಸೆಂಬರ್ 21: ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಎಲ್ಲರೂ ಕಟಾವು ಯಂತ್ರವನ್ನೇ ಅವಲಂಭಿಸಿರುವ ಕಾರಣದಿಂದಾಗಿ ಯಂತ್ರಗಳು ಸಕಾಲದಲ್ಲಿ ಲಭ್ಯವಾಗದೆ ರೈತರು ಗದ್ದೆಯಲ್ಲಿಯೇ ಬೆಳೆಯನ್ನಿಟ್ಟುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಣಾಮ ಭತ್ತವು ಗದ್ದೆಯಲ್ಲಿಯೇ ಉದುರುವಂತಾಗಿದೆ. ಈ ಬಾರಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ರೈತರಿಗೆ ಈ ಸಮಸ್ಯೆ ಕಾಡಿದ್ದು, ಕಟಾವಿನ ಬಗ್ಗೆಯೇ ಚಿಂತೆ ಮಾಡುವಂತಾಗಿದೆ.
ಬದಲಾದ ಕಾಲಘಟ್ಟದಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದ ಯಂತ್ರಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ನಾಟಿಯನ್ನು ಕೂಡ ಯಂತ್ರಗಳಿಂದಲೇ ಮಾಡಿಕೊಂಡು ಬಂದಿರುವ ರೈತರು ಇದೀಗ ಕೊಯ್ಲನ್ನು ಯಂತ್ರದಿಂದಲೇ ಮಾಡಬೇಕಾಗಿದೆ. ಆದರೆ ಯಂತ್ರಗಳು ಸಾಕಷ್ಟು ಬಾರದೆ ಇರುವುದರಿಂದ ಲಭ್ಯವಿರುವ ಯಂತ್ರಗಳಿಂದಲೇ ಕಟಾವು ಮಾಡಬೇಕಾಗಿದೆ. ಆದ್ದರಿಂದ ಮುಂಗಡ ಕಾಯ್ದಿರಿಸಿಕೊಂಡು ಅವರು ನೀಡುವ ದಿನಾಂಕದವರೆಗೆ ಕಾಯುವ ಪರಿಸ್ಥಿತಿ ರೈತರದ್ದಾಗಿದೆ.

ಸಾಮಾನ್ಯವಾಗಿ ಭತ್ತದ ಕೊಯ್ಲು ಸಮಯದಲ್ಲಿ ಇಂತಹದೊಂದು ಸಮಸ್ಯೆ ಉದ್ಬವಿಸುವುದು ಸಾಮಾನ್ಯವೇ.. ಆದರೆ ಈ ಬಾರಿ ಸ್ವಲ್ಪ ಹೆಚ್ಚು ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಈ ನಡುವೆ ಕಾಡಿದ ಫೆಂಗಲ್ ಚಂಡಮಾರುತವಾಗಿದೆ. ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆ ಸುರಿದಿತ್ತು. ಹಾಗೆಯೇ ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ವಾರಾನುಗಟ್ಟಲೆ ಮಳೆಯ ವಾತಾವರಣ ಇದ್ದುದರಿಂದ ಕೊಯ್ಲು ಮಾಡಲು ಸಾಧ್ಯವಾಗಿರಲಿಲ್ಲ.
ಚಂಡಮಾರುತದಿಂದಾಗಿ ಸಮಸ್ಯೆ ಉದ್ಭವ
ಕಟಾವಿಗೆ ವಾರಾನುಗಟ್ಟಲೆ ಬಿಡುವು ನೀಡಿದ್ದರಿಂದಲೇ ಇದೀಗ ಒಮ್ಮೆಲೆ ಕಟಾವಿಗೆ ಬೇಡಿಕೆ ಬಂದಿದ್ದರಿಂದ ಕಟಾವು ಯಂತ್ರಗಳು ಲಭ್ಯವಿಲ್ಲದಂತಾಗಿದೆ. ಮೂಲಗಳ ಪ್ರಕಾರ ಭತ್ತದ ಕಟಾವು ಯಂತ್ರಗಳು ತಮಿಳುನಾಡಿನಿಂದ ಬರುತ್ತಿದ್ದು, ಈ ಬಾರಿ ಕಡಿಮೆ ಯಂತ್ರಗಳು ಬಂದಿವೆ ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ. ಈ ಯಂತ್ರಗಳಿಗಾಗಿ ರೈತರು ಕಾದು ಸುಸ್ತಾಗಿದ್ದರೆ, ಅತ್ತ ಭತ್ತವು ಗದ್ದೆಯಲ್ಲೇ ಉದುರುತ್ತಿವೆ. ಕೂಲಿ ಕಾರ್ಮಿಕರ ಸಹಾಯದಿಂದ ಕೊಯ್ಲು ಮಾಡೋಣವೆಂದರೆ ಕೆಲಸಕ್ಕೆ ಕಾರ್ಮಿಕರೇ ಸಿಗದಂತಾಗಿದೆ.
ಚಾಮರಾಜನಗರದ ಕೆಲವು ಕೂಲಿ ಕಾರ್ಮಿಕರು ಕೇರಳ, ಕೊಡಗಿನಲ್ಲಿ ಕಾಫಿಕೊಯ್ಲು ಆರಂಭವಾಗಿರುವ ಕಾರಣ ಅತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗುತ್ತಿದ್ದು, ಸದ್ಯ ಕೂಲಿ ಕಾರ್ಮಿಕರಿಲ್ಲದೆ ಜಿಲ್ಲೆಯ ಸಂತೇಮರಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಭತ್ತದ ಪಸಲು ಕಟಾವು ಆಗದೆ ಉದುರುತ್ತಿದೆ. ಇನ್ನು ಸಂತೇಮರಹಳ್ಳಿ ಭಾಗದ ತೆಳ್ಳನೂರು, ಬನಹಳ್ಳಿ, ಬಾಗಳಿ, ಸೇರಿದಂತೆ ಹಲವು ಗ್ರಾಮಗಳು ಭತ್ತದ ಬೆಳೆಗೆ ಹೆಸರುವಾಸಿಯಾಗಿದ್ದು, ಭತ್ತದ ಕಣಜ ಎಂದು ಹೇಳುತ್ತಾರೆ.

ರೈತರಿಗೆ ಫಸಲು ನಷ್ಟವಾಗುವ ಭಯ
ಈ ವ್ಯಾಪ್ತಿಯಲ್ಲಿ ಕೊಯ್ಲು ಇಷ್ಟರಲ್ಲಿಯೇ ಮುಗಿಯ ಬೇಕಾಗಿತ್ತು. ಆದರೀಗ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದೊಂದು ದಿನವೂ ಆಮೂಲ್ಯವಾಗಿರುವ ಹಿನ್ನಲೆಯಲ್ಲಿ ಯಾವಾಗ ಕಟಾವು ಯಂತ್ರ ಸಿಗುತ್ತದೆಯೋ ಎಂದು ಯಂತ್ರ ಕಟಾವು ಮಾಡುವ ಸ್ಥಳಕ್ಕೆ ಎಡತಾಕುವುದೇ ರೈತರಿಗೊಂದು ಕೆಲಸವಾದಂತಿದೆ. ಜತೆಗೆ ಹೀಗೆ ಮುಂದುವರೆದರೆ ಫಸಲು ನಷ್ಟವಾಗುವ ಭಯವೂ ರೈತರನ್ನು ಕಾಡುತ್ತಿದೆ. ಈ ಹಿಂದೆ ರೈತನಿಗೆ ಭತ್ತದ ಬೆಳೆ ಲಾಭದಾಯಕವಾಗಿತ್ತು ಆದರೆ ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಚಟುವಟಿಕೆ ನಡೆಸುತ್ತಿರುವುದರಿಂದ ವೆಚ್ಚ ಹೆಚ್ಚಾಗುತ್ತಿದೆ.
ಕೂಲಿ ಕಾರ್ಮಿಕರ ಸಮಸ್ಯೆಯಿಂದ ಸಣ್ಣಪುಟ್ಟ ರೈತರು ಕೂಡ ಯಂತ್ರಗಳಿಗೆ ಮೊರೆ ಹೋಗುವಂತಾಗಿದ್ದು, ಇದರಿಂದ ನಷ್ಟಗಳಾಗುತ್ತಿವೆ. ಆದರೂ ರೈತರಿಗೆ ಪರ್ಯಾಯ ಮಾರ್ಗವಿಲ್ಲದೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇ ಬೇಕಾಗಿದೆ. ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಭತ್ತದ ಕಟಾವು ಆಗದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಭತ್ತದ ಬೆಲೆಯೂ ಕುಸಿತಗೊಂಡಿದೆ. ಸಣ್ಣ ರೈತರು ಕಟಾವು ಮಾಡಿ ಸ್ಥಳದಲ್ಲಿಯೇ ಭತ್ತವನ್ನು ಮಾರಿ ಖರ್ಚುವೆಚ್ಚವನ್ನು ಭರಿಸುವಂತಾಗಿದೆ. ಹೀಗಾಗಿ ಕಟಾವು ಎಷ್ಟು ಬೇಗ ಮುಗಿಯುತ್ತದೆಯೋ ಅಷ್ಟೇ ಬೇಗ ರೈತರೂ ನಿರಾಳರಾಗಲಿದ್ದಾರೆ..












Click it and Unblock the Notifications