ಜನರಿಲ್ಲದೇ ಬಣಗುಡುತ್ತಿದೆ ಗಡಿನಾಡ ದಸರಾ: ಸಂಭ್ರಮವೇ ಇಲ್ಲದೆ ಮುಕ್ತಾಯ
ಚಾಮರಾಜನಗರ, ಅಕ್ಟೋಬರ್ 20: ಚಾಮರಾಜನಗರ ದಸರಾ ಈ ಬಾರಿ ಮಂಕಾಗಿದ್ದು, ಜನರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳು ಸೋತು ಹೋಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಆಯೋಜನೆ ಎಡವಟ್ಟಿನಿಂದ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಅಪಾರ ನಿರೀಕ್ಷೆ ಹೊತ್ತು ಸಂಭ್ರಮದಿಂದ ಕಳೆದ 17 ರಂದು ಚಾಮರಾಜನಗರ ದಸರಾಗೆ ಚಾಲನೆ ಕೊಡಲಾಗಿತ್ತು. ಇಂದು ಶುಕ್ರವಾರ ಕೊನೆ ದಿನವಾಗಿದ್ದು ಇಷ್ಟೂ ದಿನವೂ ಹಗಲಿನ ಕಾರ್ಯಕ್ರಮಗಳಿಗತ್ತ ಜನರು ಸುಳಿಯುತ್ತಿಲ್ಲ. ಪ್ರಧಾನ ವೇದಿಕೆ, ಡಾ.ರಾಜ್ ಕುಮಾರ್ ರಂಗ ಮಂದಿರ, ಮಹಿಳಾ ಉತ್ಪನ್ನ ಮಾರಾಟ ಮೇಳದತ್ತ ಅಂದುಕೊಂಡಷ್ಟರ ಮಟ್ಟಿಗೆ ಜನರ ಭೇಟಿ ಈ ಬಾರಿ ಇಲ್ಲ.

2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಹೆಚ್.ಎಸ್ ಮಹದೇವ ಪ್ರಸಾದ್ ದಶಕದ ಹಿಂದೆ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ಪ್ರಾರಂಭಿಸಿದರು. ಅವರ ಕಾಲದಲ್ಲಿ ಸ್ಥಳೀಯ ಕಲಾವಿದರ ಜೊತೆಗೆ ರಾಷ್ಟ್ರ ಹಾಗು ರಾಜ್ಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದರನ್ನು ಕರೆಸಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡುವ ಮೂಲಕ ಈ ಭಾಗದ ಜನರಿಗೂ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದರು.
ಆದರೆ ಹೆಚ್.ಎಸ್ ಮಹದೇವ ಪ್ರಸಾದ್ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಚಾಮರಾಜನಗರ ದಸರಾ ರಂಗು ಕಳೆದುಕೊಳ್ಳುತ್ತಿದೆ. 2023ರ ಚಾಮರಾಜನಗರ ದಸರಾ ವೀಕ್ಷಿಸಿದವರಿಗೆ ಹಾಗೆ ಅನ್ನಿಸದೇ ಇರುವುದಿಲ್ಲ. ಚಾಮರಾಜನಗರದಲ್ಲಿ ಅ.17ರಿಂದ ಅ.20ರವರೆಗೆ ನಾಲ್ಕು ದಿನಗಳ ಕಾಲದ ದಸರಾ ಆಚರಿಸಲಾಗಿದ್ದು, ಸಂಭ್ರಮವೇ ಇಲ್ಲದೆ ಮುಕ್ತಾಯವಾಗುತ್ತಿದೆ.
ಅ.17ರಂದು 10.15ಕ್ಕೆ ಪೂಜೆ ಸಲ್ಲಿಸುವ ಮೂಲಕ ಗಡಿಜಿಲ್ಲೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಬೇಕಿದ್ದ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬರೋಬ್ಬರಿ ಎರಡು ತಾಸು ತಡವಾಗಿ ಬಂದರು. ಈ ನಡುವೆ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜೇಶ್ವರನಿಗೆ ಸಾಂಪ್ರದಾಯಿಕ ಪೂಜೆ ಕೈಂಕರ್ಯ ಮುಗಿಸಿ ಹೊರ ಬರುತ್ತಿದ್ದ ಸಮಯಕ್ಕೆ ಬಂದ ಉಸ್ತುವಾರಿ ಸಚಿವರು ಮತ್ತೊಮ್ಮೆ ಪೂಜೆ ಪುನಸ್ಕಾರಗಳ ರೀಟೇಕ್ ಮಾಡಿಸಿದರು. ಬಳಿಕ, ರೈತರೊಂದಿಗೆ ಸಭೆ ನಡೆಸಿ ವಾಪಾಸ್ ಮೈಸೂರಿಗೆ ಪ್ರಯಾಣ ಬೆಳೆಸಿದ್ದು ಬಿಟ್ಟರೆ ಮತ್ಯಾವುದೇ ಕಾರ್ಯಕ್ರಮಗಳಿಗೆ ತಲೆಹಾಕಿಲ್ಲ.

ಇನ್ನು, ಜಿಲ್ಲೆಯ ಶಾಸಕರೇನು ಅವರಿಗಿಂತ ಹೊರತಾಗಿಲ್ಲ. ಕೇವಲ ಚಾಮರಾಜನಗರ ಸಿ.ಪುಟ್ಟರಂಗಶೆಟ್ಟಿ ಹಾಗೂ ಗುಂಡ್ಲುಪೇಟೆ ಹೆಚ್.ಎಂ ಗಣೇಶ್ ಪ್ರಸಾದ್ ಅ.17ರಂದು ನಡೆದ ಉದ್ಘಾಟನೆ ಸಮಾರಂಭದಲ್ಲಿ ಮುಖ ತೋರಿಸಿದ್ದು ಬಿಟ್ಟರೆ, ಮಹಿಳಾ ದಸರಾಗೆ ಚಾಲನೆ ಕೊಡಬೇಕಿದ್ದ ಹನೂರು ಶಾಸಕ ಎಂ.ಆರ್ ಮಂಜುನಾಥ್ ಗೈರಾದರು.
ನಾಲ್ಕು ದಿನಗಳ ಕಾಲ ಜಿಲ್ಲೆಯ ಸುಮಾರು 320ಕ್ಕೂ ಹೆಚ್ಚು ಸ್ಥಳೀಯ ಕಲಾವಿದರ ತಂಡ ಬಗೆಬಗೆಯ ಮನೋರಂಜನೆ ನೀಡಿದರೂ ಜನರು ಮಾತ್ರ ಕಾರ್ಯಕ್ರಮಗಳತ್ತ ಸುಳಿದಿದ್ದು ಮಾತ್ರ ಬೆರಳೆಣಿಕೆಯಷ್ಟೇ. ಮಕ್ಕಳ ದಸರಾ, ಮಹಿಳಾ ದಸರಾ, ರೈತ ದಸರಾ ಸೇರಿದಂತೆ ಹಲವು ಹೆಸರುಗಳಲ್ಲಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಚಾಲನೆ ನೀಡಿದರೂ ಹೆಚ್ಚಿನ ಕಾರ್ಯಕ್ರಮಗಳು ಖಾಲಿ ಕುರ್ಚಿಗಳಿಗಷ್ಟೇ ಸೀಮಿತವಾಯಿತು.
ಒಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ರಾಜ್ಯದ ಜನರ ಗಮನ ಸೆಳೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅಡಿಗಲ್ಲು ಹಾಕುವ ಕನಸಿನಿಂದ ಆರಂಭಗೊಂಡ ಗಡಿಜಿಲ್ಲೆ ದಸರಾ ಈ ಬಾರಿ ಮಂಕಾಗಿದೆ. ಕೊನೆ ದಿನವಾದ ಇಂದು ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರು ಬರುವುದರಿಂದ ಕೊನೆದಿನದ ಸಂಜೆ ಕಾರ್ಯಕ್ರಮ ತುಸು ಕಳೆಗಟ್ಟುವ ನಿರೀಕ್ಷೆ ಇದೆ.












Click it and Unblock the Notifications