1,693 ವಿಶೇಷ ಚೇತನರಿಗೆ ನೆರವಾದ ಕೇಂದ್ರ ಸರ್ಕಾರ: ₹1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ
ಚಾಮರಾಜನಗರ, ಡಿಸೆಂಬರ್ 24: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಾವಿರಾರು ದಿವ್ಯಾಂಗರಿಗೆ ಶನಿವಾರ ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಅಲ್ಕಿಮೊ ಸಂಸ್ಥೆ, ಜಿಲ್ಲಾಡಳಿತ ಸಂಯುಕ್ತವಾಗಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 1693 ವಿಶೇಷ ಚೇತನರಿಗೆ ಸಾಧನ-ಸಲಕರಣೆಗಳನ್ನು ಡಿಸೆಂಬರ್ 24ರಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಸ್ಥಳೀಯ ಶಾಸಕರುಗಳು ವಿತರಣೆ ಮಾಡಿದರು.
ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ನಡೆದ ದಕ್ಷಿಣ ಭಾರತದ ಬೃಹತ್ ಕಾರ್ಯಕ್ರಮ ಇದಾಗಿದ್ದು ಟ್ರೈಸಿಕಲ್, ಶ್ರವಣ ಸಾಧನ, ವಿಶೇಷ ಚೇತನ ಮಕ್ಕಳಿಗೆ ಕಿಟ್ ಸೇರಿದಂತೆ 16 ಬಗೆಯ 2755 ಸಾಧನಗಳನ್ನು ವಿತರಿಸಲಾಗಿದ್ದು ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 1.20 ಕೋಟಿ ರೂ.ಗಳಾಗಿದೆ. ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದ್ ಅವರ ವಿಶೇಷ ಮುತುವರ್ಜಿಯಿಂದ ಜಿಲ್ಲೆಯು ರಾಜ್ಯದಲ್ಲಿ ಆಯ್ಕೆಯಾಗಿದ್ದು, ಪ್ರತಿ ಊರುಗಳಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಸಾಧನಗಳನ್ನು ವಿತರಿಸಲಾಯಿತು.

ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಿ ಮಾತನಾಡಿದ ಸಚಿವ ನಾರಾಯಣಸ್ವಾಮಿ, ವಿಕಲತೆ ಎನ್ನುವುದು ಶಾಪವಲ್ಲ, ಯಾರ ಕರ್ಮದಿಂದಲೂ ಬಂದಿದ್ದಲ್ಲ. ಎಂಬುದನ್ನು ಜನರು ಅರಿಯಬೇಕಿದೆ. ವಿಟಮಿನ್ ಕೊರತೆ, ಔಷಧಿಗಳ ಪರಿಣಾಮದಿಂದ ವಿಕಲತೆ ಉಂಟಾಗಲಿದ್ದು ದಿವ್ಯಾಂಗರ ಬಾಳಿಗೆ ಅಗತ್ಯ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಹುಟ್ಟುವಾಗಲೇ ಮೂಕ ಮಕ್ಕಳಾದರೇ ಹಿಂಜರಿಕೆ ಇಲ್ಲದೇ ವೈದ್ಯರನ್ನು ಸಂಪರ್ಕಿಸಬೇಕು, ಒಂದೆರೆಡು ವರ್ಷಗಳಲ್ಲಿ ಮಕ್ಕಳು ಮಾತನಾಡಲಿದ್ದು, ಈ ಚಿಕಿತ್ಸೆಗೆ ತಗಲುವು 7 ಲಕ್ಷ ರೂಪಾಯಿಯನ್ನು ಕೇಂದ್ರ ಸರ್ಕಾರ ಕೊಡಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಬಹಳಷ್ಟು ಕಾರ್ಯಕ್ರಮಗಳಿದ್ದು ಪ್ರಚಾರದ ಕೊರತೆಯಿಂದಾಗಿ ಜನರಿಗೆ ತಲುಪುತ್ತಿಲ್ಲ, ಜನಪ್ರತಿನಿಧಿಗಳಷ್ಟೇ ಅಧಿಕಾರಿಗಳದ್ದು ಜವಬ್ದಾರಿ ಇದೆ. ಎಂಬುದನ್ನು ಅಧಿಕಾರಿಗಳು ಅರಿತರೇ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಸಚಿವ ನಾರಾಯಣಸ್ವಾಮಿ ಹೇಳಿದರು.

ಇನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ 4 ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾಧನ-ಸಲಕರಣೆಗಳನ್ನು ವಿತರಿಸಲಾಗಿದ್ದು, ಇನ್ನುಳಿದ ನಾಲ್ಕು ಕ್ಷೇತ್ರಗಳಿಗೆ ನಂಜನಗೂಡಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications