ಕಾವೇರಿ ವಿವಾದ: ಚಾಮರಾಜನಗರದಲ್ಲಿ ಒಣಗಿದ ತರಕಾರಿ, ಸೊಪ್ಪು ಹಿಡಿದು ಆಕ್ರೋಶ
ಚಾಮರಾಜನಗರ, ಅಕ್ಟೋಬರ್, 01: ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹರಿಸಬಾರದೆಂದು ಎಂದು ಇಂದು ಕನ್ನಡಪರ ಹೋರಾಟಗಾರರು ಚಾಮರಾಜನಗರದಲ್ಲಿ ಒಣಗಿದ ತರಕಾರಿ, ಸೊಪ್ಪು ಹಿಡಿದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಒಣಗಿದ ವಿವಿಧ ಬಗೆಯ ತರಕಾರಿ ಹಿಡಿದು ತಮಿಳುನಾಡು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕಾವೇರಿ ನೀರನ್ನು ತಮಿಳುನಾಡಿನ 3 ಬೆಳೆಗೆ ಹರಿಸಲಾಗುತ್ತಿದೆ. ಆದರೆ, ನಮ್ಮಲ್ಲಿ ಕುಡಿಯಲು ನೀರಿಲ್ಲ, ತರಕಾರಿ ಬೆಳೆಗಳು ಒಣಗುತ್ತಿವೆ. ನಮ್ಮ ರೈತರು, ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು, ನೀರು ಹರಿಸಿ ಮತ್ತೇ ಮತ್ತೇ ರೈತರನ್ನು ಸಂಕಷ್ಟಕ್ಕೆ ದೂಡಬಾರದು,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಗಾಯದ ಮೇಲೆ ಬರೆ ಎಳೆಯುತ್ತಿದ್ದು ವಾಸ್ತವ ಸ್ಥಿತಿ ಅರಿತು ಸಂಕಷ್ಟ ಸೂತ್ರ ಕೊಡಲಿ ಎಂದು ಹೋರಾಟಗಾರರು ಒತ್ತಾಯಿಸಿದರು.
ರಾಜ್ಯಕ್ಕೆ ಕೋಟಿ.. ಕೋಟಿ ನಷ್ಟ
ಕರ್ನಾಟಕ, ಅಕ್ಟೋಬರ್, 1: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 26 ಬೆಂಗಳೂರು ಬಂದ್ ಹಾಗೂ ಸೆಪ್ಟೆಂಬರ್ 29 ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಹೀಗೆ ಒಂದೇ ವಾರದಲ್ಲಿ ಎರಡು ಬಾರಿ ಬಂದ್‌ಗೆ ಕರೆ ನೀಡಲಾಗಿದ್ದು, ಇದರಿಂದ ರಾಜ್ಯಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಯಾವುದೇ ಸರ್ಕಾರ ಬಂದರೂ ಕೂಡ ಇಲ್ಲಿಯವರೆಗೂ ಕಾವೇರಿ ನೀರಿನ ವಿವಾದವನ್ನು ಬಗೆಹರಿಸುತ್ತಿಲ್ಲ. ಬದಲಾಗಿ ರೈತರು, ಜನಸಾಮಾನ್ಯರು ರಸ್ತೆಗೆ ಇಳಿದು ಹೋರಾಟ ಮಾಡುವಂತೆ ಆಗಿದೆ. ಇದರಿಂದ ನಮ್ಮ ರಾಜ್ಯಕ್ಕೆ ತುಂಬಾ ನಷ್ಟ ಆಗುತ್ತಿದೆ. ಆ ನಷ್ಟವಾಗುವ ಹಣ ಕೂಡ ನಮ್ಮ ಹಣವೇ ಆಗಿರುತ್ತದೆ. ಆದರೆ ಇದನ್ನೆಲ್ಲ ಗಮನಿಸದೇ ರಾಜ್ಯದ ಎಲ್ಲಾ ಪಕ್ಷಗಳ ರಾಜಕಾರಣಿಗಳು ಬರೀ ಅವರವರ ರಾಜಕೀಯ ಬೇಳೆ ಬೀಯಿಸಿಕೊಳ್ಳುತ್ತಿದ್ದಾರೆ ಎಂದು ಜನರು ಕಿಡಿಕಾರುತ್ತಿದ್ದಾರೆ.
ಪ್ರತಿ ಬಾರಿಯೂ ನಾವು ಹೋರಾಟ ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮ ನೀರಿಗಾಗಿ ನಾವು ಹೋರಾಟ ಮಾಡುವ ಮಟ್ಟಕ್ಕೆ ಪರಿಸ್ಥಿತಿಯನ್ನು ನಮ್ಮ ರಾಜ್ಯದ ರಾಜಕಾರಣಿಗಳು ತಂದಿಟ್ಟಿದ್ದಾರೆ. ನೀವು ರಾಜಕೀಯ ಬೇಳೆ ಬೇಯಿಸಿಕೊಳ್ಳುವಿದನ್ನು ಮೊದಲು ನಿಲ್ಲಿಸಿ. ಎಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸಬೇಕಾಗಿದೆ ಎಂದು ಬುದ್ಧಿವಾದವನ್ನು ಜನರು ಹೇಳುತ್ತಿದ್ದಾರೆ.
ಒಂದೇ ವಾರದಲ್ಲಿ ರಾಜ್ಯದಲ್ಲಿ ಎರಡು ಬಂದ್ ಹಿನ್ನೆಲೆ ಸಾರಿಗೆ ನಿಗಮಗಳು, ಹೋಟೆಲ್, ಬಾರ್ ರೆಸ್ಟೋರೆಂಟ್ ಮತ್ತು ವೈನ್ ಸ್ಟೋರ್ಸ್ ನಷ್ಟಕ್ಕೆ ತುತ್ತಾಗಿವೆ. ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ಹಾಗೂ ಶುಕ್ರವಾರ (ಸೆಪ್ಟೆಂಬರ್ 29) ಕರ್ನಾಟಕ ಬಂದ್ ನಡೆಸಿದ ಹಿನ್ನೆಲೆ BMTC, KSRTC ಹಾಗೂ ಮೆಟ್ರೋ ನಿಗಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ. ಈ ಮೂರು ನಿಗಮಗಳಿಗೆ ಅಂದಾಜು 15 ಕೋಟಿ ರೂಪಾಯಿನಷ್ಟು ನಷ್ಟ ಉಂಟಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರು ನಗರದಲ್ಲಿ ಒಟ್ಟು 3850 ಮದ್ಯ ಮಾರಾಟ ಅಂಗಡಿಗಳಿದ್ದು, ಮಂಗಳವಾರ ಮತ್ತು ಶುಕ್ರವಾರದ ಬಂದ್‌ನಿಂದ ಅಂದಾಜು 180ರಿಂದ 200 ಕೋಟಿ ರೂಪಾಯಿ ನಷ್ಟ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications