ಕಾವೇರಿ ವಿವಾದ: ಚಾಮರಾಜನಗರದಲ್ಲಿ ಬೇವಿನ ಸೊಪ್ಪು, ಸಿಹಿ ಪ್ರದರ್ಶಿಸಿ ಪ್ರತಿಭಟನೆ
ಚಾಮರಾಜನಗರ, ನವೆಂಬರ್, 01: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಚಾಮರಾನಗರದಲ್ಲಿ ಕಳೆದ 50 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೂಡ ಬೇವಿನಸೊಪ್ಪು, ಸಿಹಿ ತಿಂಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ಚರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದ ತನಕ ರ‍್ಯಾಲಿ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಬೇವಿನಸೊಪ್ಪು, ಸಿಹಿ ಪ್ರದರ್ಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಸಿಹಿ ಕೊಟ್ಟು, ಕರ್ನಾಟಕದ ಪಾಲಿಗೆ ಕಹಿ ಕೊಟ್ಟು ಅನ್ಯಾಯ ಮಾಡಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು. ಕನ್ನಡ ರಾಜ್ಯೋತ್ಸವ ಸುವರ್ಣ ಮಹೋತ್ಸವದ ಸಿಹಿ ಒಂದೆಡೆಯಾದರೆ, ತಮಿಳುನಾಡಿಗೆ ನೀರು ಹರಿಯುತ್ತಿರುವುದು ಕನ್ನಡಿಗರ ಪಾಲಿಗೆ ಕಹಿಯಾಗಿದೆ ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ಕಲಾವಿದರಿಂದ ವಿನೂತನ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಇತ್ತೀಚೆಗಷ್ಟೇ ಡೊಳ್ಳು ಕುಣಿತದ ಮೂಲಕ ಕಾವೇರಿ ಹೋರಾಟವನ್ನು ಕಲಾವಿದರು ಮುಂದುವರೆಸಿದ್ದರು.
ನಗರದ ಸರ್.ಎಂ.ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ನಿರಂತರ ಧರಣಿ ಬೆಂಬಲಿಸಿ ಸಂತೆ ಕಸಲಗೆರೆ ಹಾಗೂ ಕಾರಸವಾಡಿ ಗ್ರಾಮದ ಜನತೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಿದ್ದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಹಿತ ರಕ್ಷಣಾ ಸಮಿತಿಯ ಮುಖಂಡರ ಜೊತೆಗೂಡಿ ಮಾನವ ಸರಪಳಿ ರಚಿಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮೆರವಣಿಗೆ ಹೊರಟಿದ್ದರು.
ಡೊಳ್ಳಿನ ಸದ್ದಿನೊಂದಿಗೆ ಹೆಜ್ಜೆ ಹಾಕಿದ ಹೋರಾಟಗಾರರು ನಿರಂತರ ಧರಣಿ ಸ್ಥಳಕ್ಕೆ ತೆರಳಿ ಕೆಲಕಾಲ ಡೊಳ್ಳು ಕುಣಿತದ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ರಾಜ್ಯದ ಜನತೆ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ತಂದೊಡ್ಡಿರುವ ರಾಜ್ಯ ಸರ್ಕಾರ ನಿರ್ಲಕ್ಷ್ಯತನ ಬಿಟ್ಟು ಜವಾಬ್ದಾರಿಯುತ ಹೊಣೆಗಾರಿಕೆ ನಿರ್ವಹಿಸಬೇಕು ಎಂದಿದ್ದರು. ಕೃಷ್ಣರಾಜ ಸಾಗರದಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ಸ್ಥಗಿತ ಮಾಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಂಕಷ್ಟ ಸನ್ನಿವೇಶದಲ್ಲಿ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದ್ದರು.
ಈ ವೇಳೆ ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ್, ಸತೀಶ್, ಪಾರ್ವತಮ್ಮ, ಕಾರಸವಾಡಿ ಸುಧೀರ್‌ಕುಮಾರ್, ಕೆ.ರಾಮಕೃಷ್ಣ, ಡಿ.ಪ್ರಕಾಶ್, ಮಾಧು, ಡೊಳ್ಳು ಕುಣಿತ ಕಲಾವಿದ ಗಂಗಾಧರ್, ಮಮತಾ, ಲಕ್ಷ್ಮಿ, ಸಾಕಮ್ಮ, ಬೆಂಗಳೂರಿನ ಮಾನವ ಹಕ್ಕು ಸಂಘಟನೆಯ ಮುಖಂಡ, ಮೋಹನ್‌ರಾಜ್ ಒಡೆಯರ್, ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ನಾರಾಯಣ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications