ಕಾವೇರಿ ವಿವಾದ: ತುಕಾಲಿ ಸರ್ಕಾರಗಳಿಂದ ರಾಜ್ಯದ ಜನರಿಗೆ ಅನ್ಯಾಯ: ಚಾಮರಾಜನಗರದಲ್ಲಿ ಹೋರಾಟಗಾರರ ಆಕ್ರೋಶ
ಚಾಮರಾಜನಗರ, ಅಕ್ಟೋಬರ್, 06: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕಳೆದ 1 ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಗುಜರಿ ವಸ್ತುಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು. ಇದೇ ವೇಳೆ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರ, ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳು ತುಕಾಲಿ ಸರ್ಕಾರಗಳಾಗಿವೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರು, ಕನ್ನಡಿಗರ ಪಾಲಿಗೆ ಗುಜರಿ ಸರ್ಕಾರಗಳಾಗಿವೆ ಎಂಬುದನ್ನು ತೋರಿಸಲು ಮುರುಕಲು ಸೈಕಲ್, ಹಳೇ ಕಬ್ಬಿಣ, ಖಾಲಿ ಸೀಸಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ ಜನರ ಹಿತ ಕಾಯದೇ ನಿರಂತರವಾಗಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರ, ಮಾತನಾಡದ ಜನಪ್ರತಿನಿಧಿಗಳು, ಮಧ್ಯಸ್ಥಿಕೆ ವಹಿಸದ ಕೇಂದ್ರ ಸರ್ಕಾರ, ಕಾವೇರಿ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ ಯಾವುದಕ್ಕೂ ಉಪಯೋಗಕ್ಕೆ ಬಾರದ ಗುಜರಿ ಸರ್ಕಾರಗಳಾಗಿವೆ ಎಂದು ಆಕ್ರೋಶ ಹೊರಹಾಕಿದರು. ಇನ್ನು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಅ.10ಕ್ಕೆ ಕರ್ನಾಟಕ-ತಮಿಳುನಾಡು ಗಡಿ ಬಂದ್: ವಾಟಾಳ್
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಹೇಳಿದರು.
ಪಟ್ಟಣದ ಸಂಜಯ ಚಿತ್ರಮಂದಿರದ ಬಳಿ ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ನೀರು ಬಿಡದಂತೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಿಂದ ಕೆ.ಆರ್.ಎಸ್. ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದೇ ಹೋದರೆ, ರೈತರು ಮತ್ತು ಕನ್ನಡಪರ ಹೋರಾಟಗಾರರು ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ಹೊಸೂರು, ಚಾಮರಾಜನಗರ ಹಾಗೂ ಕನಕಪುರ ಗಡೀ ಭಾಗಗಳಲ್ಲಿ ಅಕ್ಟೋಬರ್ 10ರಂದು ಬಂದ್ ಮಾಡುವ ಮೂಲಕ ಚಳವಳಿ ನಡೆಸುತ್ತೇವೆ. ಈ ವಿಚಾರವಾಗಿ ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿದರು.
ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕಾರಣಿಗಳು ಕರ್ನಾಟಕದ ವಿರುದ್ಧ ದ್ವೇಷಾಸೂಯೆ ಸಾಧಿಸುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಕನ್ನಡಿಗರಿಂದ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆ.ಆರ್.ಎಸ್. ಜಲಾಶಯ ಮುತ್ತಿಗೆ ಕಾರ್ಯಕ್ರಮಕ್ಕೆ ರೈತರು ಮತ್ತು ಕನ್ನಡ ಸಂಘಟನೆಗಳ ಹೋರಾಟಗಾರರು ಬೆಂಬಲ ನೀಡುತ್ತಿರುವುದು ನಮ್ಮ ಹೋರಾಟಕ್ಕೆ ಸ್ಫೂರ್ತಿ ತಂದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳು ನರಸತ್ತ ಹೇಡಿಗಳಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನೀರಿನ ವಿಚಾರದಲ್ಲಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.












Click it and Unblock the Notifications