V.Somanna vs C.Puttarangashetty: ಚಾಮರಾಜನಗರದಲ್ಲಿ ಕೈ, ಕಮಲ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಕುಟುಂಬ ವರ್ಗ
ಚಾಮರಾಜನಗರ, ಏಪ್ರಿಲ್, 28: ವಿಧಾನಸಭೆ ಚುನಾವಣೆ ಹಿನ್ನಲೆ ಅಭ್ಯರ್ಥಿಗಳ ಪರ ಕುಟುಂಬ ವರ್ಗವೇ ಪ್ರಚಾರಕ್ಕಿಳಿದ ಘಟನೆ ಚಾಮರಾಜನಗರ ಕ್ಷೇತ್ರದಲ್ಲಿ ನಡೆದಿದೆ. ಚಾಮರಾಜನಗರದಲ್ಲಿ ಪತಿ ವಿ.ಸೋಮಣ್ಣನವರ ಪರ ಪತ್ನಿ ಶೈಲಜಾ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ.
ಶೈಲಜಾ ಸೋಮಣ್ಣ ಅವರು ಅಸಮಾಧಾನಿತರನ್ನು ಭೇಟಿ ಮಾಡುವ ಮೂಲಕ ಅಖಾಡದಲ್ಲಿ ಭರ್ಜರಿ ಪ್ರಚಾರಕ್ಕಿಳಿದಿದ್ದಾರೆ. ವಿವಿಧ ಗ್ರಾಮಗಳಿಗೆ ತೆರಳಿ ಸೋಮಣ್ಣ ಪರ ಬ್ಯಾಟಿಂಗ್ ಮಾಡುವ ಮೂಲಕ ಮತಯಾಚನೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪರ ಅವರ ಇಬ್ಬರು ಪುತ್ರಿಯರಾದ ಶೀಲಾ ಮತ್ತು ವೇದಾವತಿ ಪ್ರಚಾರಕ್ಕಿಳಿದಿದ್ದಾರೆ. ಅಲ್ಲದೆ ಪುಟ್ಟರಂಗಶೆಟ್ಟಿ ಪರ ಅವರು ಕ್ಷೇತ್ರದ ವಿವಿಧೆಡೆ ಮತಬೇಟೆಗೆ ಮುಂದಾಗಿದ್ದಾರೆ.

ಸತತ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಲು ಪುಟ್ಟರಂಗಶೆಟ್ಟಿ ಈ ಬಾರಿ ಸೋಮಣ್ಣನ ವಿರುದ್ಧ ಪ್ರಬಲ ಪೈಪೋಟಿ ಎದುರಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಪುಟ್ಟರಂಗಶೆಟ್ಟಿ ಅವರ ಪುತ್ರಿಯರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯಗೆ ವಿ.ಸೋಮಣ್ಣ ತಿರುಗೇಟು
ಇನ್ನು ಸೋಮಣ್ಣ ಯಾರು ಎಂದು ಸಿದ್ದರಾಮಯ್ಯ ಇತ್ತೀಚೆಗಷ್ಟೇ ಕೇಳಿದ್ದರು. ಇದಕ್ಕೆ ವಿ.ಸೋಮಣ್ಣ ಇದೀಗ ಚಾಮರಾಜನಗರದಲ್ಲಿ ತಿರುಗೇಟು ನೀಡಿದ್ದರು.
2006 ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಏಟು ತಿಂದಿದ್ದೇನೆ. ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆಗ ನನ್ನ ಕಾರಿನ ಗ್ಲಾಸ್ ಒಡೆದು ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮಾಜವನ್ನು ಎದುರು ಹಾಕಿಕೊಂಡು ಅವರುಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬ್ರ ತಲೇಲಿ ಇಲ್ಲ ಎಂದು ತಿರುಗೇಟು ನೀಡಿದ್ದರು.
ನಾನು ಸಾಹೇಬ್ರೆ ಅಂತಾ ಕರೆಯುತ್ತೇನೆ. ಅವರು ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಇದೆ ನನಗೂ, ಅವರಿಗೂ ಇರುವ ವ್ಯತ್ಯಾಸ. ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರೀನೂ ಅಲ್ಲ. ಇಬ್ಬರೂ ಅಭ್ಯರ್ಥಿಗಳು ಅಷ್ಟೇ. ಸಿದ್ದರಾಮಯ್ಯ ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅನ್ನುವ ಡೈಲಾಗ್ ಕಡಿಮೆ ಮಾಡಿದರೆ ಒಳ್ಳೆಯದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ. ನಾನು ವರುಣಾದಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಧಿ ನಿಯಮವಾಗಿದೆ ಎಂದು ವಿ.ಸೋಮಣ್ಣ ಹೇಳಿದ್ದರು.
ವರುಣಾ ಬಳಿಕ ಚಾಮರಾಜನಗರದಲ್ಲಿ ಎರಡನೇ ಸುತ್ತಿನ ಮತಬೇಟೆ ಆರಂಭಿಸಿರುವ ಸಚಿವ ಸೋಮಣ್ಣ ಚಾಮರಾಜನಗರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಮುಂಜಾನೆಯಿಂದಲೇ ಸೋಮಣ್ಣ ಮತ ಬೇಟೆ ಆರಂಭಿಸಿದ್ದಾರೆ.
ಬೆಳಗಿನ ವಾಕಿಂಗ್‌ನಿಂದಲೇ ಸಚಿವ ಸೋಮಣ್ಣ ಚಾಮರಾಜನಗರದಲ್ಲಿ ಪ್ರಚಾರ ನಡೆಸುತ್ತಿದ್ದು, ವಾಯುವಿಹಾರಿಗಳು, ಆಟೋ ಚಾಲಕರು, ಟೀ ಅಂಗಡಿಯಲ್ಲಿರುವ ಜನರನ್ನು ಭೇಟಿಯಾಗಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಮತ ಬೇಟೆ ವೇಳೆಸಚಿವ ಸೋಮಣ್ಣ ಬಾಲಕನೋರ್ವನನ್ನು ಭೇಟಿಯಾಗಿದ್ದು, ಇಬ್ಬರೂ ಕುತೂಹಲ ವಿಚಾರವಾಗಿ ಚರ್ಚೆ ನಡೆಸಿದ್ದರು.
ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ಸೋಮಣ್ಣ ಮತಯಾಚನೆ ಮಾಡುತ್ತಿದ್ದ ವೇಳೆ ಎದುರಾದ ಬಾಲಕನೋರ್ವ ರಾಜ್ಯದ ಮುಖ್ಯಮಂತ್ರಿ ಆಗಲು ಏನು ಮಾಡಬೇಕು ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದ್ದಾನೆ. ಬಾಲಕನ ಪ್ರಶ್ನೆಗೆ ಸಮಾಧಾನದಿಂದ ಖುಷಿಯಿಂದ ಉತ್ತರಿಸಿದ್ದರು.
ನೀನು ಏನು ಮಾಡಬೇಡ. ಚೆನ್ನಾಗಿ ಓದು. ಸಿಎಂ, ಗಿಎಂ ಎಲ್ಲಾ ಲೆಕ್ಕ ಇಲ್ಲ. ನೀನೆ ದೊಡ್ಡ ಸಿಎಂ, ಚೆನ್ನಾಗಿ ಓದು, ಕ್ರೀಡೆಯಲ್ಲಿರು. ಬಾಕಿದೆಲ್ಲಾ ಬಿಟ್ಟುಬಿಡು. ನಿನ್ನ ಹಣೆಯಲ್ಲಿ ಬರೆದಿದ್ದರೆ, ನೀನು ರಾಜಕೀಯಕ್ಕೆ ಬರುತ್ತೀಯಾ ಎಂದು ಸೋಮಣ್ಣ ಬಾಲಕನಿಗೆ ಉತ್ತರಿಸಿದ್ದಾರೆ.
ಇನ್ನು ಇದೇ ವೇಳೆ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದ ಅವ್ಯವಸ್ಥೆ ನೋಡಿ ಸಚಿವ ಸೋಮಣ್ಣ ಬಿಜೆಪಿ ಮುಖಂಡರ ವಿರುದ್ಧ ಗರಂ ಆಗಿದ್ದಾರೆ. ನನಗೆ ಪಕ್ಷ ತಾಯಿ ಸಮಾನ. ಒಂದು ವಿಚಾರಕ್ಕೆ ಅಲ್ಲ. ನೀನೊಬ್ಬ ಬದಲಾವಣೆಯಾಗು. ಬದಲಾಗದಿದ್ದರೆ ನಿಮಗೆ ನಷ್ಟವಾಗುವುದು. ಒಳ್ಳೆಯದಕ್ಕೆ ನಾನು ಪ್ರಾಣ ಕೊಡುತ್ತೇನೆ. ಕೆಟ್ಟವರಿಗೆ ಮಾತ್ರ ಬಿಡುವುದಿಲ್ಲ. ದಯಮಾಡಿ ಕೆಲಸ ಮಾಡಿ ಎಂದಿದ್ದರು.
ಅಲ್ಲದೇ 10 ವರ್ಷದಿಂದ ಅವರೇನೂ ಮಾಡಿಲ್ಲ. ಆದರೆ ನಮ್ಮ ಸರ್ಕಾರದ ಆಡಳಿತದಲ್ಲಿ ನಾವೇನು ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರವಿದ್ದಾಗಲೂ ಏನು ಕೆಲಸ ಮಾಡಿಲ್ಲ ಎಂದು ಬಿಜೆಪಿ ಮುಖಂಡರಿಗೆ ಸೋಮಣ್ಣ ಚಾಟಿ ಬೀಸಿದ್ದರು.
ಇನ್ನು ಚಾಮರಾಜನಗರದಲ್ಲಿ ಎರಡನೇ ದಿನದ ಮತಪ್ರಚಾರ ನಡೆಸುತ್ತಿರುವ ಸಚಿವ ಸೋಮಣ್ಣ ಇಂದು ಕೂಡ 18 ಕ್ಕೂ ಹೆಚ್ಚು ಊರುಗಳಿಗೆ ಭೇಟಿ ಕೊಡಲಿದ್ದಾರೆ. ಇದರ ಜೊತೆ, ಸಮುದಾಯದ ಮುಖಂಡರನ್ನು ಸಚಿವ ಸೋಮಣ್ಣ ಭೇಟಿಯಾಗಿ ಬಿಜೆಪಿಗೆ ಹಾಗೂ ತಮ್ಮ ಗೆಲುವಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.












Click it and Unblock the Notifications