ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ, ಹೆಚ್ಚು ಕಡಿಮೆ ಆದ್ರೆ ಬಿಜೆಪಿಯೂ ಬಿದ್ದೋಗತ್ತೆ, ದಳನೂ ಇರಲ್ಲ: ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ, ಜುಲೈ, 25: ಸರ್ಕಾರ ಬೀಳಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಆದರೆ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾತ್ರಿ ಕಂಡ ಬಾವಿಗೆ ಯಾರೂ ಹಗಲಲ್ಲಿ ಬೀಳುದಿಲ್ಲ, ಬಿಜೆಪಿ ಕುತಂತ್ರ ಈಗಾಗಲೇ ಜಗಜ್ಜಾಹೀರಾಗಿದೆ. ಹೆಚ್ಚು ಕಡಿಮೆ ಆದರೆ ಬಿಜೆಪಿನೂ ಬಿದ್ದು ಹೋಗುತ್ತದೆ, ಮತ್ತೊಂದೆಡೆ ದಳನೂ ಇರಲ್ಲ ಎಂದರು.
ಮೈಸೂರು ಹಾಗೂ ಚಾಮರಾಜನಗರವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡಗೆ ಮನವಿ ಮಾಡಿದ್ದೇನೆ. ಶೇಕಡಾ 20ರಷ್ಟು ಮಳೆ ಕಡಿಮೆಯಾಗಿದ್ದು, ಈಗ ಬೀಳುತ್ತಿರುವ ಮಳೆಯಿಂದಲೂ ಬೆಳೆ ಕೈ ಸೇರುವುದಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆನೆ ತುಳಿತದಿಂದ ಬಾಲಕ ಸತ್ತರೂ ಇಲ್ಲದ ಪರಿಹಾರ
ಹಾಗೆಯೇ ಆನೆ ತುಳಿತಕ್ಕೆ ಬಾಲಕ ಮೃತಪಟ್ಟರೂ ಮೊದಲ ಕಂತಿನ ಪರಿಹಾರ ನೀಡದ ಅರಣ್ಯಾಧಿಕಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆವರಿಳಿಸಿ ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರ ತಾಲೂಕಿನ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ಆನೆ ತುಳಿತದಿಂದ ಗಾಯಗೊಂಡಿದ್ದ ಬಾಲಕ ಇಂದು ಅಸುನೀಗಿದ್ದಾನೆ. ಇನ್ನು ಮೃತ ಬಾಲಕನ ಮನೆಗೆ ಶಾಸಕರು ಭೇಟಿ ನೀಡಿದ ವೇಳೆ, ಮೊದಲ ಕಂತಿನ ಹಣ ಬಾರದಿರುವುದು ತಿಳಿದು ಎಸಿಎಫ್ ಸುರೇಶ್ ಹಾಗೂ ಆರ್‌ಎಫ್ಒ ನಿಸಾರ್ ಅಹಮದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸೋಲಿಗರನ್ನು ಕಂಡರೇ ಯಾಕೆ ನಿರ್ಲಕ್ಷ್ಯ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಆನೆ ದಾಳಿ ಮಾಡಿ ತಿಂಗಳಾದರೂ ಮೊದಲ ಕಂತಿನ ಹಣ ಕೊಟ್ಟಿಲ್ಲ. ನಿಮ್ಮ ಡಿಸಿಎಫ್ ಅವರಿಗೆ ಈ ಘಟನೆನೇ ಗೊತ್ತಿಲ್ಲವೇ, ಡಾಕುಮೆಂಟ್ ಕೊಡಲು ಅವರಿಗೇನು ಗೊತ್ತು? ನೀವು ಕಲೆಕ್ಟ್ ಮಾಡಬೇಕು. ಎಂಎಲ್‌ಸಿ ಕೇಸ್ ಆಗಿಲ್ಲವೇ ಎಂದು ಪ್ರಶ್ನಸಿ ಬೆವರಿಳಿಸಿದರು. ಹಾಗೆಯೇ ಕೂಡಲೇ ಮೊದಲ ಕಂತಿನ ಹಣ ಹಾಗೂ ಉಳಿದ ಹಣವನ್ನು ಫಲಾನುಭವಿಗೆ ಕೊಡಿ ಎಂದು ಸೂಚಿಸಿದರು.











Click it and Unblock the Notifications