ಚಾಮರಾಜನಗರ: ಬಸ್ ಚಾಲನೆ ವೇಳೆ ಚಾಲಕ ಹೃದಯಾಘಾತದಿಂದ ಸಾವು
ಚಾಮರಾಜನಗರ, ಜುಲೈ 12: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಹಾಗೆಯೇ ಇದೀಗ ಹೃದಯಾಘಾತದಿಂದ ಖಾಸಗಿ ಬಸ್ ಚಾಲಕ ಸಾವನ್ನಪ್ಪಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಗುರುಸಿದ್ದು (55) ಹೃದಯಾಘಾತದಿಂದ ಮೃತಪಟ್ಟವರು. ಯಳಂದೂರಿನಿಂದ ಗುಂಡ್ಲುಪೇಟೆಗೆ ತೆರಳುವ ಆರ್ಪಿಕೆ ಎಂಬ ಖಾಸಗಿ ಬಸ್ ಚಾಲಕರಾಗಿದ್ದ ಗುರುಸಿದ್ದು ಅವರಿಗೆ ಬಸ್ ಚಾಲನೆ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ನಲ್ಲಿದ್ದ ಸಿಬ್ಬಂದಿ ಅವರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲೆಯಲ್ಲಿ ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ 2ನೇ ಪ್ರಕರಣ ಇದಾಗಿದೆ. ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಖಾಸಗಿ ಬಸ್ ಚಾಲಕ ರಮೇಶ್ (47) ಹನೂರು ಪಟ್ಟಣದಿಂದ ಕೊಳ್ಳೇಗಾಲಕ್ಕೆ ಖಾಸಗಿ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವೇಳೆ ಮಧುವನಹಳ್ಳಿ ಗ್ರಾಮದ ಬಳಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದರು.
ಆರೋಗ್ಯ ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳ ಹಿನ್ನೆಲೆ ಇತ್ತೀಚೆಗಷ್ಟೇ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಈ ಕುರಿತು ಮಾತನಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಹೃದಯಾಘಾತಕ್ಕೆ ಕೋವಿಡ್ ಸೋಂಕು ಸಗ ಕಾರಣ ಆಗಿರುಬಹುದೇ ಹೊರತು ಲಸಿಕೆಯಲ್ಲ ಎಂದು ಹೇಳಿದ್ದರು.
ಹಠಾತ್ ಮರಣಗಳಿಗೆ ಕಾರಣ ಆಗುವ ಕೆಲವು ಕಾಯಿಲೆಗಳನ್ನು ಅಧಿಸೂಚಿತ ಕಾಯಿಲೆಗಳೆಂದು ಘೋಷಿಸಲಾಗುವುದು. ಆಸ್ಪತ್ರೆಯ ಹೊರಗೆ ಸಂಭವಿಸುವ ಹಠಾತ್ ಮರಣಗಳಿಗೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಹೃದಯ ಸಂಬಂಧಿ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗುವುದು. ಸರ್ಕಾರಿ ನೌಕರರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಜೊತೆಗೆ ಖಾಸಗಿ ನೌಕರರು ವರ್ಷಕ್ಕೊಮ್ಮೆ ತಪಾಸಣೆ ನಡೆಸಬೇಕೆಂದು ಸೂಚನೆ ನೀಡಿದ್ದರು.
ಕಾಡುಹಂದಿ ದಾಳಿಗೆ ರೈತನಿಗೆ ಗಂಭೀರ ಗಾಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿಯೊಂದು ದಾಳಿ ನಡೆಸಿ ರೈತನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ. ಭೀಮನಬೀಡು ಗ್ರಾಮದ ಗೋಪಾಲ ಶೆಟ್ಟಿ ಎಂಬುವರು ಗಾಯಗೊಂಡ ರೈತ. ಶನಿವಾರ ಬೆಳಗ್ಗೆ ಕಾಡು ಹೊಂದಿ ದಾಳಿ ನಡೆಸಿ ಕೋರೆಹಲ್ಲುಗಳಿಂದ ರೈತನ ಕಾಲುಗಳಿಗೆ ಗಂಭೀರ ಗಾಯ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ರೈತನಿಗೆ ಸೂಕ್ತ ಪರಿಹಾರ ಕೊಡಬೇಕೆಂದು ರೈತಸಂಘ ಒತ್ತಾಯಿಸಿದೆ.
ಅದರಲ್ಲೀ ಹಾಸನ ಜಿಲ್ಲೆಯಲ್ಲೇ ಮೊದಲು ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದವು. ಬಳಿಕ ಅಲ್ಲಿಂದ ಇಲ್ಲಿಯವರೆಗೂ ಹಲವು ಜಿಲ್ಲೆಗಳಲ್ಲೂ ಕೂಡ ವರದಿಯಾಗುತ್ತಲೇ ಇದ್ದು, ಇನದು ಯುವ ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.












Click it and Unblock the Notifications