ಆಕ್ರೋಶಕ್ಕೆ ಕಾರಣವಾಯ್ತು ಲಾಕ್ ಡೌನ್ ನಲ್ಲಿ ಬಿಜೆಪಿ ಶಾಸಕರ ಮಗನ ಕುದುರೆ ಸವಾರಿ
ಚಾಮರಾಜನಗರ, ಮೇ 12: ಈಗ ಎಲ್ಲೆಲ್ಲೂ ಕೊರೊನಾ ಭೀತಿ ಆವರಿಸಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಕೂಡ ಹೇರಲಾಗಿದೆ. ಆದರೆ ಇಂಥ ಸಮಯದಲ್ಲಿ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ ಕುಮಾರ್ ಪುತ್ರ ಭುವನಕುಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಸವಾರಿ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ, ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಸಮೀಪ ನಿನ್ನೆ ಭುವನಕುಮಾರ್ ಕುದುರೆ ಓಡಿಸಿದ್ದು, ಲಾಕ್ ಡೌನ್ ನಲ್ಲಿ ದೊಡ್ಡವರ ಮಕ್ಕಳಿಗೊಂದು ಕಾನೂನು, ನಮಗೊಂದು ಕಾನೂನು ಇದೆಯೇ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ರೂಲ್ಸ್ ಬ್ರೇಕ್: ಪೂನಂ ಪಾಂಡೆ ವಿರುದ್ಧ ಎಫ್ ಐ ಆರ್
ಲಾಕ್ ಡೌನ್ ವೇಳೆ ಈ ರೀತಿಯ ವರ್ತನೆ ಸರಿಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಗೊಂಡಿದ್ದು, ಅನಗತ್ಯವಾಗಿ ಓಡಾಡುವವರನ್ನು ಪ್ರಶ್ನೆ ಮಾಡುವ ಪೊಲೀಸರು ಶಾಸಕರ ಪುತ್ರನನ್ನು ಕೇಳಲಿಲ್ಲವೇ? ಎಂದು ಪ್ರಶ್ನೆ ಹಾಕಿದ್ದಾರೆ.
ಲಾಕ್ ಡೌನ್ ಇನ್ನೂ ಮುಕ್ತಾಯವಾಗಿಲ್ಲ. ಜೊತೆಗೆ ಮಾಸ್ಕ್ ಧರಿಸುವುದು ಕೂಡ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಹೀಗಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿ ಕುದುರೆ ಸವಾರಿ ಮಾಡಿರುವುದು ಎಷ್ಟು ಸರಿ? ಶಾಸಕನ ಪುತ್ರ ಎಂಬ ಕಾರಣಕ್ಕೆ ಪೊಲೀಸರು ಸುಮ್ಮನಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.