ಮತದಾನ ಮೊದಲು ನಂತರ ಮದುವೆ: ಓಡಿ ಬಂದು ಮತ ಹಾಕಿದ ವರ-ವಧು
ಚಾಮರಾಜನಗರ ಏಪ್ರಿಲ್ 26: ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ವರನೊಬ್ಬ ಓಡಿ ಬಂದು ಮತ ಚಲಾಯಿಸಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
ತಾಳಿ ಕಟ್ಟುವ ಶುಭ ಗಳಿಗೆಗೂ ಮುನ್ನ ವರ ಚೇತನ್ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ಒಂಬತ್ತು ಗಂಟೆಗೆ ತಾಳಿ ಕಟ್ಟುವ ಶುಭ ಮುಹೂರ್ತವಿತ್ತು. ಹೀಗಾಗಿ ಇದಕ್ಕೂ ಮುನ್ನ ಮತಗಟ್ಟೆಗೆ ಓಡೋಡಿ ಬಂದ ವರ ಚೇತನ್ ಮತ ಹಾಕಿದರು.

ಈ ವೇಳೆ ವರನ ಕುಟುಂಬಸ್ಥರು ಸಾಥ್ ನೀಡಿದರು. ಶುಭ ಮುಹೂರ್ತಕ್ಕೆ ಸಮಯ ಮೀರುವ ಕಾರಣ ವರ ಓಡೋಡಿ ಬಂದು ಮತ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತದಾನದ ಹೆಸರೇಳಿಕೊಂಡು ಮನೆಯಲ್ಲಿ ಮತದಾನ ಮಾಡದೇ ಇರುವ ಯುವ ಪೀಳಿಗೆಗೆ ಈ ಘಟನೆ ಮಾದರಿಯಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, 'ನನ್ನ ಹಕ್ಕನ್ನು ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು. ತಾಳಿ ಕಟ್ಟುವ ಮುನ್ನ ಬಂದು ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ' ಎಂದರು.
ಇನ್ನೂ ಚಿಕ್ಕಮಗಳೂರು, ಮಡಿಕೇರಿಯಲ್ಲೂ ಇಂಥಹ ಘಟನೆ ನಡೆದಿದೆ. ಮತದಾನದ ದಿನವೇ ಹಲವೆಡೆ ಮದುವೆ ನಡೆಯುತ್ತಿರುವುದರಿಂದಾಗಿ ಕುಟುಂಬಸ್ಥರು, ವಧು-ವರರರು ಮತಗಟ್ಟೆಗಳಿಗೆ ಬಂದು ವೋಟ್ ಹಾಕುವುದು ಕೊಂಚ ಕಷ್ಟವಾಗಿದೆ.
ಅದಾಗ್ಯೂ ಕೆಲವೆಡೆ ವರ-ವಧು ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದ್ದು ಕಂಡು ಬಂದಿದೆ. ಚಿಕ್ಕಮಗಳೂರು, ಮಡಿಕೇರಿಯಲ್ಲೂ ಮದುವೆಗೆ ಸಿಂಗಾರಗೊಂಡ ವಧುಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಮತಗಟ್ಟೆಗೆ ಭೇಟಿ ನೀಡಿ ಮತಚಲಾಯಿಸಿದರು.












Click it and Unblock the Notifications