ಬಂಡೀಪುರ: ಮೋದಿ ಮೆಚ್ಚುಗೆಗೆ ಪಾತ್ರವಾದ ಎಲಿಫ್ಯಾಂಟ್ ಆಪರೇಷನ್: ವಿದ್ಯುತ್ ಶಾಕ್‌ನಿಂದ ಒದ್ದಾಡುತ್ತಿದ್ದ ಆನೆ ಉಳಿದಿದ್ದು ಹೇಗೆ?
ಪ್ರಧಾನಿ ಅವರು ಮಾಡಿದ ಟ್ವೀಟ್‌ವೊಂದು ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಪ್ರಧಾನಿಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಯಾವ ಕಾರಣಕ್ಕೆ ಅನ್ನುವುದನ್ನು ಇಲ್ಲಿ ತಿಳಿಸಲಾಗಿದೆ.
ಚಾಮರಾಜನಗರ, ಫೆಬ್ರವರಿ, 18: ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್‌ವೊಂದು ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳ ಮುಖದಲ್ಲಿ ಸಂತಸ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಯಾವ ಕಾರಣಕ್ಕೆ ಅನ್ನುವುದನ್ನು ಇಲ್ಲಿ ತಿಳಿಸಲಾಗಿದೆ ನೀವೆ ನೋಡಿ.
ಕಳೆದ ಮಂಗಳವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯಕ್ಕೆ ಒಳಪಡುವ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದ ಖಾಸಗಿ ಜಮೀನಿನಲ್ಲಿ ಅಕ್ರಮ ವಿದ್ಯುತ್ ಪ್ರವಹಿಸಿ ಅಂದಾಜು 25 ವರ್ಷದ ಹೆಣ್ಣಾನೆ ನರಳುತ್ತಿತ್ತು. ಇದನ್ನು ಗಮನಿಸಿದ ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ವೈದ್ಯರು ಚಿಕಿತ್ಸೆ ಕೊಟ್ಟು ಆನೆಯನ್ನು ಬದುಕಿಸಿದ್ದಾರೆ. ಇದಕ್ಕೆ ಶನಿವಾರ (ಫೆಬ್ರವರಿ 18) ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ, ಅರಣ್ಯ ಇಲಾಖೆಯ ಕಾರ್ಯವನ್ನು ಪ್ರಶಂಸಿದ್ದಾರೆ. ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರೂ ಕೂಡ ಅರಣ್ಯ ಇಲಾಖೆಯ ಮಹತ್ವದ ಕಾರ್ಯವನ್ನು ಶ್ಲಾಘಿಸಿದರು.
ಮಹತ್ವದ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಅರಣ್ಯ ಸಚಿವರ ಟ್ವೀಟ್‌ಗೆ ಪ್ರಧಾನಿ ಮೋದಿ ಮರು ಟ್ವೀಟ್ ಮಾಡಿದ ಬಳಿಕ ಬಂಡೀಪುರ ಅರಣ್ಯ ಇಲಾಖೆ ಕಾರ್ಯವನ್ನು ಲಕ್ಷಾಂತರ ಜನರು ನೋಡಿದ್ದಾರೆ. ಹಾಗೆಯೇ ಈ ಮಹತ್ವದ ಕಾರ್ಯಕ್ಕೆ ಸಾವಿರಾರು ಮಂದಿ ಲೈಕ್ ಮಾಡಿ, ಕಮೆಂಟ್ ಮಾಡಿದ್ದಾರೆ. ಬಂಡೀಪುರ ಎಸಿಎಫ್ ರವೀಂದ್ರ ಅವರು ಆನೆಯ ಸ್ಥಿತಿಯನ್ನು ಕಂಡು ಮರುಗಿದ್ದು, ಮೈಸೂರಿನ ಚಾಮುಂಡೇಶ್ವರಿಗೆ ಹರಕೆ ಕಟ್ಟಿಕೊಂಡಿದ್ದರು ಎಂದು ತಿಳಿದುಬಂದಿದೆ. ಆನೆ ಬಿದ್ದು ಒದ್ದಾಡುತ್ತಿದ್ದನ್ನು ಕಂಡಾಗ ಮನಸ್ಸು ತಡೆಯಲಾರದೇ ದೇವರಿಗೆ ಮೊರೆ ಹೋಗಿದ್ದೆ. ನಿನ್ನ ಮಡಿಲಿಗೆ ಈ ಪ್ರಾಣಿಯನ್ನು ಹಾಕಿದ್ದು ಬದುಕಿಸುವಂತೆ ಪ್ರಾರ್ಥಿಸಿಕೊಂಡೆ. ದೈವಕೃಪೆಯಿಂದ ಕೊನೆಗೂ ಆನೆ ಚೇತರಿಸಿಕೊಂಡಿತು ಎಂದು ರವೀಂದ್ರ ತಿಳಿಸಿದ್ದಾರೆ.

ನಿರಂತರ ಚಿಕಿತ್ಸೆ, 40 ಮಂದಿ ಪರಿಶ್ರಮ
ಆನೆ ವಿದ್ಯುತ್ ಪ್ರವಹಿಸಿ ನರಳಾಡುತ್ತಿದೆ ಎಂಬ ಮಾಹಿತಿ ಅರಿತ ಕೂಡಲೇ ಒಂದು ತಾಸಿನಲ್ಲೇ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಡಲು ಮುಂದಾದರು. ಆ್ಯಂಟಿ ಬಯೋಟಿಕ್ ಹಾಗೂ ಇತರೆ ಇಂಜೆಕ್ಷನ್ ಕೊಟ್ಟಿದ್ದಾರೆ. ವಿದ್ಯುತ್ ಪ್ರವಹಿಸಿದ್ದರಿಂದ ನೀರಿನಂಶ ಇಲ್ಲದೇ ನಿತ್ರಾಣಗೊಂಡಿದ್ದ ಆನೆಗೆ 200 ಲೀಟರ್‌ನಷ್ಟು ನೀರು ಕುಡಿಸಿದ್ದಾರೆ. ಚಿಕಿತ್ಸೆ ಕೊಟ್ಟ ಬಳಿಕವೂ ನಿಲ್ಲಲಾಗದೇ ಒದ್ದಾಡುತ್ತಿದ್ದಾಗ ಜೆಸಿಬಿ ಸಹಾಯದಿಂದ ಆನೆಯನ್ನು ನಿಲ್ಲಿಸಿದ್ದಾರೆ. ಯಾವುದೇ ತೋಮದರೆ ಆಗದ ರೀತಿಯಲ್ಲಿ ನಿಲ್ಲಿಸಿ ಕೊನೆಗೂ ಆನೆಯನ್ನು ಬದುಕಿಸಿದ್ದಾರೆ.
ಕೊನೆಗೂ ಆನೆಯನ್ನು ಬದುಕಿಸಿದ ಇಲಾಖೆ
ಕರೆಂಟ್ ಶಾಕಿಗೆ ಒಳಪಟ್ಟ ಆನೆಯನ್ನು ಬದುಕಿಸಿರುವುದು ವಿರಳಾತಿ ಪ್ರಕರಣವಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಗೆದ್ದಿದ್ದೇವೆ. ಪ್ರಾಣಿ ಸಾಯಿಸುವವತು ಮಾತ್ರ ಇಲ್ಲ. ಅದನ್ನು ಬದುಕಿಸುವವರು ಕೂಡ ಇದ್ದೇವೆ ಎಂಬುದನ್ನು ತೋರಿಸಬೇಕಿತ್ತು, ಆ ಕೆಲಸ ಈಗ ಆಗಿದೆ. ಪ್ರಧಾನಿ, ಕೇಂದ್ರ ಅರಣ್ಯ ಸಚಿವರು ಸೇರಿದಂತೆ ಇನ್ನಿತರ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ನಮ್ಮ ಕೆಲಸವನ್ನು ಗುರುತಿಸಿ ಶ್ಲಾಘಿಸಿದ್ದಾರೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದರು.












Click it and Unblock the Notifications