ಬಂಡೀಪುರದಲ್ಲಿ ಬಿರುಸಿನ ಬಿದಿರು ಬಿತ್ತನೆ ಕಾರ್ಯ ಆರಂಭ
ಚಾಮರಾಜನಗರ, ಮೇ 17: ಬಂಡೀಪುರ ಉದ್ಯಾನದಲ್ಲಿ ಬಿದಿರು ಬೆಳೆಸುವುದರೊಂದಿಗೆ ಮುಂದಿನ ದಿನಗಳಲ್ಲಿ ಸಸ್ಯಾಹಾರಿ ಪ್ರಾಣಿಗಳ ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಹುಲಿ ಸಂರಕ್ಷಿತ ಪ್ರದೇಶವಾಗಿರುವ ಬಂಡೀಪುರ ಅರಣ್ಯದಲ್ಲಿ ಹಸಿರು ಮೇವಿಗೆ ಆದ್ಯತೆ ನೀಡಿದ್ದು, ಈಗಾಗಲೇ ಅರಣ್ಯಕ್ಕೆ ಮಾರಕವಾಗಿ ಲಂಟನಾ ಬೆಳೆಯುತ್ತಿರುವುದರಿಂದ ಅದರ ತೆಕ್ಕೆಗೆ ಸಿಲುಕಿ ಕುರುಚಲು ಕಾಡು, ಹುಲ್ಲು ನಾಶವಾಗುತ್ತಿದೆ, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಮೇವಿಗೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಸುವುದು ಅಗತ್ಯವಾಗಿದೆ. ಇದರ ಜತೆಗೆ ಲಂಟನಾ ತೆರವುಗೊಳಿಸಿರುವ ಪ್ರದೇಶದಲ್ಲಿ ಬಿದಿರು ಬೆಳೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಅರಣ್ಯದಲ್ಲಿ ಬಿದಿರು ಬಿತ್ತನೆ ಆರಂಭ
ಹಾಗೆ ನೋಡಿದರೆ ಹಬ್ಬಿ ಬೆಳೆಯುತ್ತಿರುವ ಲಂಟನಾವನ್ನು ನಾಶ ಪಡಿಸುವುದು ಅಷ್ಟು ಸುಲಭವಾಗಿಲ್ಲ. ಹೀಗಾಗಿ ಸಾಧ್ಯವಾದಷ್ಟು ಬಯಲು ಪ್ರದೇಶಗಳಲ್ಲಿ ಹುಲ್ಲು ಬೆಳೆಸುವ ಕಾರ್ಯವನ್ನು ಕೂಡ ಅರಣ್ಯ ಇಲಾಖೆ ಮಾಡುತ್ತದೆ. ಇದರ ನಡುವೆ ಕೆಲವು ವರ್ಷಗಳ ಹಿಂದೆ ಬಿದಿರು ಹೂಬಿಟ್ಟು ನಾಶವಾಗಿರುವುದರಿಂದ ಈಗಷ್ಟೆ ಮತ್ತೆ ಹುಟ್ಟಿ ಅಲ್ಲಲ್ಲಿ ಮೆಳೆಗಳು ಕಾಣಸಿಗುತ್ತಿವೆ. ಮುಂದಿನ ದಿನಗಳಲ್ಲಿ ಬಂಡೀಪುರ ಉದ್ಯಾನದಲ್ಲಿ ಇನ್ನಷ್ಟು ಬಿದಿರು ಬೆಳೆಸುವ ಕೆಲಸಕ್ಕೆ ಅರಣ್ಯ ಇಲಾಖೆ ಇದೀಗ ಚಾಲನೆ ನೀಡಿದೆ.

1.90 ಕೋಟಿ ರೂ. ಯೋಜನೆ
ಈಗಾಗಲೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ವಲಯಗಳ ವ್ಯಾಪ್ತಿಯಲ್ಲಿ ಬಿದಿರು ಬಿತ್ತನೆ ಬೀಜ ನೆಡುವ ಕಾರ್ಯ ಪ್ರಗತಿಯಲಿದ್ದು, ಮುಂಗಾರು ಮಳೆ ಸುರಿದಿರುವುದರಿಂದ ಭೂಮಿ ತೇವಗೊಂಡಿದೆ. ಈ ವೇಳೆ ಬಿತ್ತನೆ ಮಾಡಿದರೆ ಮುಂದಿನ ದಿನಗಳಲ್ಲಿ ಮೊಳಕೆಯೊಡೆದು ಬೆಳೆಯಲು ಅನುಕೂಲವಾಗಲಿದೆ. ಹೀಗಾಗಿಯೇ ಬಂಡೀಪರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹನ್ನೆರಡು ವಲಯದಲ್ಲಿ ಹುಲ್ಲುಗಾವಲು ಅಭಿವೃದ್ಧಿ ಪಡಿಸಲು 1.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಿದಿರು ಬಿತ್ತನೆ ಕಾರ್ಯ ನಡೆಯುತ್ತಿದೆ.

ಪ್ರಗತಿಯಲ್ಲಿ ಬಿದಿರುವ ಬೆಳೆಸುವ ಕೆಲಸ
ಸದ್ಯ ಯೋಜನೆ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರದಲ್ಲಿ ಇಪ್ಪತೈದು ಕೆಜಿ ಬಿದಿರು ಬೀಜವನ್ನು ಐದು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದರೆ, ಗೋಪಾಲಸ್ವಾಮಿ ಬೆಟ್ಟದ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿ, ಮೂಲೆಹೊಳೆಯ ನಾಲ್ಕು ಹೆಕ್ಟೇರ್ ನಲ್ಲಿ ಇಪ್ಪತ್ತು ಕೆಜಿ, ಕುಂದುಕೆರೆಯ ನಾಲ್ಕು ಎಕರೆಯಲ್ಲಿ ಇಪ್ಪತ್ತು ಕೆಜಿ, ಮದ್ದೂರು ನಾಲ್ಕು ಹೆಕ್ಟೇರ್ ನಲ್ಲಿ ಇಪ್ಪತ್ತು ಕೆಜಿ, ಓಂಕಾರ ವಲಯದ ಎರಡು ಹೆಕ್ಟೇರ್ ಪ್ರದೇಶದಲ್ಲಿ ಹತ್ತು ಕೆಜಿ, ಹೆಡಿಯಾಲದ ಎರಡು ಹೆಕ್ಟೇರ್ ಪ್ರದೇಶದಲ್ಲಿ ಎರಡು ಕೆಜಿ, ಎ.ಎಂ.ಗುಡಿಯ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿಯನ್ನು ಬಿತ್ತನೆ ಮಾಡಲಾಗುತ್ತಿದೆ.
Recommended Video

ಲಂಟನಾ ನಾಶವಾದಲ್ಲಿ ಬಿದಿರು ಬಿತ್ತನೆ
ಇಷ್ಟೇ ಅಲ್ಲದೆ, ನುಗುವಿನ ಎರಡು ಹೆಕ್ಟೇರ್ ನಲ್ಲಿ ಹತ್ತು ಕೆಜಿ, ಗುಂಡ್ರೆ ಮೂರು ಹೆಕ್ಟೇರ್ ಪ್ರದೇಶದಲ್ಲಿ ಹದಿನೈದು ಕೆಜಿ, ಎನ್.ಬೇಗೂರುನ ಮೂರು ಹೆಕ್ಟೇರ್ ಪ್ರದೇಶಕ್ಕೆ ಹದಿನೈದು ಕೆಜಿ, ಮೊಳೆಯೂರು ಮೂರು ಹೆಕ್ಟೇರ್ ನಲ್ಲಿ ಹದಿನೈದು ಕೆಜಿ ಹಾಗೂ ಇತರೆ ಲಂಟನಾ ಕಳೆಗಳನ್ನು ನಿರ್ಮೂಲನ ಮಾಡಿರುವ ಪ್ರದೇಶಗಳಲ್ಲಿ ಹಳ್ಳ-ಕೊಳ್ಳಗಳಲ್ಲಿ ಹಿನ್ನೀರಿನ ಪ್ರದೇಶಗಳಲ್ಲಿ ಹಾಗೂ ವಿವಿಧ ಸ್ಥಳಗಳ ಸುಮಾರು ಮೂವತ್ತೆಂಟು ಹೆಕ್ಟೇರ್ ಪ್ರದೇಶದಲ್ಲಿ ನೂರತೊಂಬತ್ತು ಕೆಜಿ ಬಿದಿರು ಬೀಜವನ್ನು ಬಿತ್ತನೆ ಮಾಡಲಾಗುತ್ತಿದ್ದು, ಪ್ರತಿ ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಮಾಡಿ ಪೋಷಿಸಿ ಬೆಳಸಲು ಅರಣ್ಯ ಇಲಾಖೆಯಿಂದ 5 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಪರಮೇಶ್ ತಿಳಿಸಿದ್ದಾರೆ.












Click it and Unblock the Notifications