ಚಾಮರಾಜನಗರ: ಜೈ ಶ್ರೀರಾಮ್ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಮನವಿ
ಚಾಮರಾಜನಗರ, ಫೆಬ್ರವರಿ, 20: ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿರುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಾಗೃತಿ ಜಾಥಾವು ಫೆಬ್ರವರಿ 8ರಂದು ಚಾಮರಾಜನಗರದ ಹರದನಹಳ್ಳಿ ಗ್ರಾಮ ಪಂಚಾಯಿತಿಗೆ ಆಗಮಿಸಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುವಾಗ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.

ಈ ನಡುವೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಪೂರಕವಾದ ಜೈಭೀಮ್ ಘೋಷಣೆಯನ್ನು ಕೂಗುತ್ತಿದ್ದರು. ಈ ಘೋಷಣೆಗೆ ವಿರುದ್ಧ ಕೆಲವು ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿರುತ್ತಾರೆ. ಪಕ್ಕದಲ್ಲೇ ಕುಳಿತಿದ್ದ ಶಿಕ್ಷಕರ ಗಮನಕ್ಕೆ ಬಂದ ಮಕ್ಕಳಿಗೆ ಜೈ ಶ್ರೀರಾಮ್ ಘೋಷಣೆ ಕೂಗದಂತೆ ಹೇಳಿದ್ದಾರೆ.
ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರು ಊರಿನ ಕೆಲವು ಕಿಡಿಕೇಡಿಗಳ ಜೊತೆ ಕೈಜೋಡಿಸಿ ಮಕ್ಕಳಿಗೆ ಎಚ್ಚರಿಕೆ ನೀಡದೇ ಶಿಕ್ಷಕರ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕವಾಗಿ ಶಿಕ್ಷಕರಿಗೆ ತೊಂದರೆ ನೀಡಿರುತ್ತಾರೆ. ಹಾಗೂ ಮಾಡದಿರುವ ತಪ್ಪಿಗೆ ಕ್ಷಮೆಯನ್ನು ಯಾಚಿಸುವಂತೆ ಒತ್ತಾಯ ಮಾಡಿರುತ್ತಾರೆ.
ಗ್ರಾಮದ ಮುಖಂಡರ ಜೊತೆ ಘಟನೆ ಬಗ್ಗೆ ಚರ್ಚಿಸಿ ಗ್ರಾಮದ ಮಹಿಳಾ ಸಂಘದ ವತಿಯಿಂದ ಕಾರ್ಯಕ್ರಮದ ದಿನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಶಾಲಾ 'ಹಂತದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಫೆಬ್ರವರಿ 12ರಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಮನವಿ ಸಲ್ಲಿಸಿರುತ್ತಾರೆ.
ಆದರೆ ಘಟನೆ ನಡೆದು ಇಷ್ಟು ದಿನಗಳಾದರೂ ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಊರಿನ ಕೆಲವು ಕಿಡಿಕೇಡಿಗಳ ಜೊತೆ ಸೇರಿಕೊಂಡು ಮಕ್ಕಳಿಗೆ ಎಚ್ಚರಿಕೆ ನೀಡದೇ ಶಿಕ್ಷಕರ ವಿರುದ್ಧವೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ದಲಿತ ಎಂಬ ಕಾರಣಕ್ಕೆ ಶಿಕ್ಷಕರ ವರ್ಗಾವಣೆ ಒತ್ತಾಯ ಮಾಡುತ್ತಿರುವುದು ಖಂಡನೀಯ ಎಂದು ಪತ್ರದಲ್ಲಿ ದೂರಿದ್ದಾರೆ.
ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಿ ನೊಂದ ದಲಿತ ದೈಹಿಕ ಶಿಕ್ಷಕರಿಗೆ ಸೂಕ್ತ ರಕ್ಷಣೆ ನೀಡಿ, ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವಂತೆ ಹಾಗೂ ವಿದ್ಯಾರ್ಥಿಗಳನ್ನು ಜೈ ಶ್ರೀರಾಮ್ ಘೋಷಣೆ ಕೂಗಲು ಪ್ರೇರೆಪಿಸಿದ ಕೆಲವು ಕಿಡಿಕೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಶಿಸ್ತುಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಬಳಗದ ಅಧ್ಯಕ್ಷ ಎಸ್.ಪಿ.ಮಹೇಶ್, ವಾಸು ಹೊಂಡರಬಾಳು, ಸಿದ್ದರಾಜು ದೊಡ್ಡರಾಯಪೇಟೆ, ರಾಜಶೇಖರ ಹೆಗ್ಗೋಠಾರ, ಚಂದಕವಾಡಿ ರಾಜಶೇಖರ ಸೇರಿದಂತೆ ಇನ್ನಿತರರು ಹಾಜರಿದ್ದರು.












Click it and Unblock the Notifications