Bandipur Road: ಹೆಚ್ಚು ಬಸ್ ಸಂಚಾರಕ್ಕೆ ಅವಕಾಶ, ಕೇರಳದ ಮನವಿಗೆ ಕರ್ನಾಟಕ ಹೇಳಿದ್ದೇನು?
ಚಾಮರಾಜನಗರ, ಮಾರ್ಚ್ 25: ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸದಾ ಚರ್ಚೆಯಲ್ಲಿರುವ ವಿಚಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದು. ಪ್ರಸ್ತುತ ಕೆಲವು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಉಳಿದ ವಾಹನಗಳು ಬಂಡೀಪುರ ಮೂಲಕ ರಾತ್ರಿ ಕೇರಳಕ್ಕೆ ಸಂಚಾರ ನಡೆಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧ ವಾಪಸ್‌ಗೆ ಕೇರಳ ಕಾಂಗ್ರೆಸ್ ನಾಯಕರು ರಾಜ್ಯದ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.
ರಾತ್ರಿ ವೇಳೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೇರಳ ರಾಜ್ಯ ಕರ್ನಾಟಕ ಸರ್ಕಾರದ ಮುಂದೆ ಹೊಸದಾಗಿ ಬೇಡಿಕೆ ಇಟ್ಟಿದೆ. ಕರ್ನಾಟಕ ಸರ್ಕಾರ ಈ ಬೇಡಿಕೆಯನ್ನು ತಿರಸ್ಕಾರ ಮಾಡಿದೆ.

ಸುಪ್ರೀಂಕೋರ್ಟ್ ಆದೇಶದ ಅನ್ವಯ ಯಥಾಸ್ಥಿತಿಯನ್ನು ಕಾಪಾಡಲಾಗುತ್ತದೆ. ಕೇರಳ ರಸ್ತೆ ಸಾರಿಗೆ ನಿಗಮದ ಹೆಚ್ಚಿನ ಬಸ್‌ಗಳು ರಾತ್ರಿ ವೇಳೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗಲು ಹೊಸದಾಗಿ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ.
ಕರ್ನಾಟಕ-ಕೇರಳ: ಕಳೆದ ವಾರ ಕೇರಳ ಮೂಲದ ಬೈಜು ಪೌಲ್ ಮ್ಯಾಥ್ಯೂಸ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಕೆ ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ಕರ್ನಾಟಕ-ಕೇರಳ ನಡುವೆ ಬಂಡೀಪುರ ಮೂಲಕ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಅರ್ಜಿ ಬೆನ್ನಲ್ಲೇ ಕೇರಳ ಸರ್ಕಾರ ಸಹ ರಾಜ್ಯ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಕೆ ಮಾಡಿತ್ತು.
2009ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಯಿತು. ಕರ್ನಾಟಕ, ಕೇರಳ ರಾಜ್ಯ ಸರ್ಕಾರದ 4 ಬಸ್‌ಗಳು, ಆಂಬ್ಯುಲೆನ್ಸ್ ಮಾತ್ರ ರಾತ್ರಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.
ಕೇರಳ ಮತ್ತು ಕರ್ನಾಟಕ ನಡುವೆ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಲು ಸಾಲು ಹಬ್ಬ, ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಬಂಡೀಪುರ ಮೂಲಕ ರಾತ್ರಿ ವೇಳೆ 8 ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಸುಪ್ರೀಂಕೋರ್ಟ್‌ಗೆ ಅರ್ಜಿ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಇಲಾಖೆಯ ಹಿರಿಯ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿದರು. ಬಂಡೀಪುರ ರಸ್ತೆಯಲ್ಲಿ ಸದ್ಯ ಇರುವ ವಾಹನ ಸಂಚಾರದ ನಿಯಮದ ಯಥಾಸ್ಥಿತಿ ಮುಂದುವರೆಸಲು ತೀರ್ಮಾನಿಸಿದರು.
ರಾತ್ರಿ ವೇಳೆ ಬಂಡೀಪುರದಲ್ಲಿ ವಾಹನ ಸಂಚಾರ ನಿಷೇಧಿಸುವುದನ್ನು ಸಮರ್ಥನೆ ಮಾಡಿಕೊಂಡು ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಕೆ ಮಾಡಲಾಗಿದೆ. ಆದ್ದರಿಂದ ಹೊಸದಾಗಿ ಡಿಸಿಎಫ್ ದರ್ಜೆಯ ಅಧಿಕಾರಿ ಸಲ್ಲಿಸಿರುವ ಪ್ರಮಾಣ ಪತ್ರ ವಾಪಸ್ ಪಡೆಯುವಂತೆ ಸಚಿವರು ಸೂಚನೆ ನೀಡಿದರು.
ಅರಣ್ಯ ಸಚಿವರ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ಗುಂಡ್ಲುಪೇಟೆ ಶಾಸಕ ಹೆಚ್. ಎಂ. ಗಣೇಶ ಪ್ರಸಾದ್ ಬಂಡೀಪುರದಲ್ಲಿ ವಾಹನ ಸಂಚಾರದ ಕುರಿತು ಈಗಿರುವ ನಿಯಮವನ್ನು ಸಡಿಲಿಕೆ ಮಾಡುವ ಅಥವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಯಾವುದೇ ಪ್ರಸ್ತಾಪ ಕರ್ನಾಟಕ ಸರ್ಕಾರದ ಮುಂದಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಬಂಡೀಪುರದ ವಿಚಾರ ಮುಂದಿಟ್ಟುಕೊಂಡು ಕರ್ನಾಟಕದ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಇರುವ ನಿಷೇಧವನ್ನು ಕೈ ಬಿಡಲು ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದೆ. ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡಿರುವುದಿಲ್ಲ. ಎಲ್ಲಾ ಮಾದರಿ ಹೋರಾಟಕ್ಕೆ ಸಹ ಸಿದ್ಧವಾಗಿದ್ದೇವೆ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿಷ್ಠೆಗೆ ಕರ್ನಾಟಕ ಸರ್ಕಾರ ತಲೆ ಬಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ತಯಾರು ಮಾಡಿದ ಆದೇಶವನ್ನು ಸಚಿವ ಈಶ್ವರ ಖಂಡ್ರೆ ರಾಜ್ಯದಲ್ಲಿ ಜಾರಿಗೊಳಿಸಲು ಹೊರಟಿದ್ದಾರೆ. ಆ ಮೂಲಕ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.












Click it and Unblock the Notifications