ಚಾಮರಾಜನಗರ ಗಡಿ ಭಾಗದಲ್ಲಿ ಆತಂಕ ಸೃಷ್ಟಿಸಿದ ಹುಲಿ
ಚಾಮರಾಜನಗರ, ಅಕ್ಟೋಬರ್.01: ಹುಲಿ ಸಂರಕ್ಷಿತ ಪ್ರದೇಶದಲ್ಲಿರಬೇಕಾದ ಹುಲಿಯೊಂದು ಇದ್ದಕ್ಕಿದ್ದಂತೆ ಕಾಡಂಚಿನ ಗ್ರಾಮದೊಳಕ್ಕೆ ಬಂದು ಎಲ್ಲೆಂದರಲ್ಲಿ ಓಡಾಡಿದ ಪರಿಣಾಮ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ತಮಿಳುನಾಡು ಗಡಿಭಾಗದ ಮೆಟ್ಟಲವಾಡಿ ಗ್ರಾಮದಲ್ಲಿ ನಡೆದಿದೆ.
ಮೆಟ್ಟಲವಾಡಿ ಗ್ರಾಮಕ್ಕೆ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಿಂದ ಬಂದ ಹುಲಿಯೊಂದು ತೋಟದೊಳಗೆ ಹೊಕ್ಕು ಸಂಜೆಯ ತನಕ ಅಲ್ಲೇ ಬಿಡಾರ ಹೂಡಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿತು. ಗ್ರಾಮದೊಳಕ್ಕೆ ನುಗ್ಗಿದ ಹುಲಿಯನ್ನು ನೋಡಿದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಮಿಳುನಾಡಿನ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಜೆಯ ವೇಳೆಗೆ ತೋಟದಲ್ಲಿ ಇದ್ದ ಹುಲಿಯನ್ನು ಕಾಡಿಗೆ ಅಟ್ಟುವ ಯತ್ನದಲ್ಲಿ ಸಫಲರಾದರು.

ಗ್ರಾಮದೊಳಗೆ ಬಂದ ಹುಲಿ ಮತ್ತೆ ಬರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಗಸ್ತು ಹೆಚ್ಚಿಸಲಾಗಿದ್ದು, ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸುವ ಕಾರ್ಯ ಮುಂದುವರೆದಿದೆ.
ಅರಣ್ಯದಿಂದ ಗ್ರಾಮದೊಳಕ್ಕೆ ಬಂದಿರುವ ಹುಲಿಯನ್ನು ಕಾಡಿಗೆ ಅಟ್ಟಿದ್ದರೂ ಮತ್ತೆ ಅದು ಎಲ್ಲಿ ಗ್ರಾಮದೊಳಕ್ಕೆ ಬಂದು ಬಿಡುತ್ತೋ ಎಂಬ ಭಯ ಕಾಡುತ್ತಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸಿದ್ದಾರೆ.












Click it and Unblock the Notifications