ಚಾಮರಾಜನಗರ: ನೆಚ್ಚಿನ ಶಿಕ್ಷಕಿ ಕುರಿತು 16 ಕೃತಿಗಳನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ವಿದ್ಯಾರ್ಥಿನಿ
ಚಾಮರಾಜನಗರ, ಮಾರ್ಚ್, 08: ಸಾಮಾನ್ಯರು ತನ್ನ ನೆಚ್ಚಿನ ಶಿಕ್ಷಕಿಯನ್ನು ನೆನೆಯುತ್ತಿದ್ದರೆ, ಈ ವಿಭಿನ್ನ ವಿದ್ಯಾರ್ಥಿನಿ ತನ್ನ ಗುರುವಿನ ಕುರಿತು ಪುಸ್ತಕ ಬರೆದು 'ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲೆ ಮಾಡಿದ್ದಾಳೆ.
ಚಾಮರಾಜನಗರ ತಾಲೂಕಿನ ದೊಡ್ಡಮೋಳೆಯ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಮತ್ತು ಗಣೇಶ್ ಪುತ್ರಿ, ಚಾಮರಾಜನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ತೃತೀಯ ವರ್ಷದ ವಿದ್ಯಾರ್ಥಿನಿ ಜಿ.ಅಮೃತಾ ಈ ಸಾಧನೆ ಮಾಡಿದ್ದಾಳೆ.

ಈಕೆ ತನ್ನ ಊರಿನ ಸರ್ಕಾರಿ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾಳೆ. 6ನೇ ತರಗತಿ ಓದುವಾಗ ಸುಷ್ಮಾ ಎನ್ನುವವರು ಸಮಾಜ-ವಿಜ್ಞಾನ ಶಿಕ್ಷಕಿಯಾಗಿ ಶಾಲೆಗ ಬಂದರು. ಪ್ರಸ್ತುತ ಇವರು ನಂಜನಗೂಡಿನ ಬಿದರಗೂಡಿನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಶಿಕ್ಷಕಿಯ ಬಳಿ 8ನೇ ತರಗತಿವರೆಗೆ ಪಾಠ ಕೇಳಿದ್ದ ಜಿ.ಅಮೃತಾ ಅತೀವ ಗೌರವ, ಪ್ರೀತಿಯ ಒಡನಾಟವನ್ನು ಬೆಳೆಸಿಕೊಂಡಳು.
ಇದು ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣ ಮುಂದುವರೆಸಿ ಬಿ.ಕಾಂ ಪದವಿ ತರಗತಿಗೆ ಸೇರಿದರೂ ನೆಚ್ಚಿನ ಶಿಕ್ಷಕಿ ಸುಷ್ಮಾ ಮೇಲಿನ ಅಭಿಮಾನ ಕಡಿಮೆಯಾಗಲೇ ಇಲ್ಲ. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಆದಾಗ ಮನೆಯಲ್ಲೇ ಇದ್ದ ಜಿ.ಅಮೃತಾ ತನ್ನ ನೆಚ್ಚಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸುಷ್ಮಾ ಕುರಿತು 'ನನ್ನ ಗುರುವೆಂಬ ಸುಗಮ'ಪುಸ್ತಕ ಬರೆಯಲಾರಂಭಿಸಿದಳು. ಶಿಕ್ಷಕಿಯ ಗುಣ, ಇಬ್ಬರ ನಡುವಿನ ಒಡನಾಟವನ್ನು ಬರಹಕ್ಕಿಳಿಸಿದಳು. 'ನನ್ನ ಗುರುವೆಂಬ ಸುಗಮ' ಶೀರ್ಷಿಕೆಯಡಿ 16 ಕವಿತೆಗಳನ್ನು ರಚಿಸಿದಳು.
ಒಂದು ವರ್ಷಗಳ ಕಾಲ ಸಿದ್ಧ ಪಡಿಸಿರುವ ಈ ಪುಸ್ತಕವನ್ನು ಕಳೆದ ವರ್ಷ ಸಂವನ್ ಪಬ್ಲಿಕೇಷನ್ ಪ್ರಕಟಿಸಿದ್ದು, 2024ರ ಫೆಬ್ರವರಿ 27ರಂದು ಕೃತಿ ಬರೆದಿದ್ದ ಅಮೃತಾ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಗರಿಮೆಗೆ ಪಾತ್ರವಾಗಿದ್ದಾರೆ.
16 ಕವಿತೆಗಳಲ್ಲೇನಿದೆ?: 'ನನ್ನ ಗುರುವೆಂಬ ಸುಗಮ' ಶೀರ್ಷಿಕೆ ಗುರವಿನ ಸನಿಹ ನನ್ನ ಧ್ಯಾನ ಎಂಬ ಅಡಿಬರಹದ 67 ಪುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಜಿ.ಅಮೃತಾ ತನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಕುರಿತು ಬರೆದಿದ್ದಾರೆ. ಗುರುವೆಂದರೆ ಯಾರು?, ಗುರುವಿಗೆ ಹೃದಯ ಪೂರ್ವಕ ನಮನ, ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ, ದಡ ಸೇರಿಸಲು ನಾವಿಕರಾಗಿ, ಇಲ್ಲದೇ ನಿಮ್ಮ ಮಾರ್ಗದರ್ಶನ, ಅದೇ ಮೊಗವು.. ಅದೇ ನಗುವು, ನೀವು ಹೇಳಿಕೊಟ್ಟ ನೈತಿಕತೆ ನೀತಿ, ದೇವತೆಯ ಆಗಮನ ಎಂಬಿತ್ಯಾದಿ ಮೊದಲ ಸಾಲುಗಳ ಕವಿತೆಗಳು ಪುಸ್ತಕದಲ್ಲಿವೆ.
ನನಗೆ ಸಣ್ಣಪುಟ್ಟ ಕವಿತೆಗಳನ್ನು ಬರೆಯುವ ಹವ್ಯಾಸ ಇತ್ತು. ಕೋವಿಡ್ ಸಂದರ್ಭದಲ್ಲಿ ನನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಅವರ ಕುರಿತು ಕೃತಿ ರಚನೆ ಮಾಡಿದೆ. ಶಿಕ್ಷಕಿ ತಾಯಿ ಇದ್ದಂತೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಆಗುತ್ತದೆ ಎಂದು ಗೊತ್ತಿರಲಿಲ್ಲ. ಕೃತಿ ಬರೆದ ಬಳಿಕ ಸಾಹಿತ್ಯದತ್ತ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡಿದ್ದೇನೆ ಎಂದು ಅಮೃತಾ ಹೇಳುತ್ತಾರೆ.












Click it and Unblock the Notifications