ಚಾಮರಾಜನಗರ: ಬಾಚಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ, ಗ್ರಾಮಸ್ಥರು ನಿರಾಳ
ಚಾಮರಾಜನಗರ, ಜನವರಿ 20: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಅರಣ್ಯ ವಲಯ ವ್ಯಾಪ್ತಿಯ ಬಾಚಹಳ್ಳಿ ಸಮೀಪದಲ್ಲಿ ನಡೆದಿದೆ. ಬಾಚಹಳ್ಳಿ ಗ್ರಾಮದ ಮುದ್ದಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸುಮಾರು 5ರಿಂದ 6 ವರ್ಷ ವಯಸ್ಸಿನ ಚಿರತೆ ಸೆರೆಯಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಬೊಮ್ಮಲಾಪುರ ಗ್ರಾಮದ ಗೋಪಾಲನಾಯಕ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕುರಿ ಮೇಲೆ ಚಿರತರ ದಾಳಿ ನಡೆಸಿ ಕೊಂದು ಹಾಕಿತ್ತು ಜೊತೆಗೆ ಬಾಚಹಳ್ಳಿ, ಅಂಕಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಜನರು ಹಾಗೂ ರೈತರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರೈತರು ಮತ್ತು ಸ್ಥಳೀಯರ ಒತ್ತಾಯದ ಮೇರೆಗೆ ಕುಂದಕೆರೆ ವಲಯದ ಆರ್ ಎಫ್. ಓ ನವೀನ ಕುಮಾರ್ ನೇತೃತ್ವದಲ್ಲಿ ಬೋನು ಇರಿಸಲಾಗಿತ್ತು. ಇದೀಗ ಆ ಬೋನಿಗೆ ಚಿರತೆ ಬಿದ್ದಿದೆ.

ಬೋನಿಗೆ ಚಿರತೆ ಬಿದ್ದ ಮಾಹಿತಿ ಅರಿತ ಅರಣ್ಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೆರೆಯಾದ ಚಿರತೆಯನ್ನು ಬಂಡೀಪುರದ ಮೂಲೆಹೊಳೆ ಅರಣ್ಯ ಪ್ರದೇಶದ ಒಳಗೆ ಬಿಡಲು ಚಿಂತಿಸಲಾಗಿದೆ ಎಂದು ಕುಂದಕೆರೆ ವಲಯದ ಅರಣ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ವೇಳೆ ಕುಂದಕೆರೆ ವಲಯದ ಆರ್.ಎಫ್.ಓ ನವೀನ್ ಕುಮಾರ್, ಅರಣ್ಯಾಧಿಕಾರಿ ಮನೋಹರ್, ಮಹೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಭಾಗಿಯಾಗಿದ್ದರು.
ಮಂಡ್ಯದಲ್ಲಿ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಕನ್ನಲಿ ಗ್ರಾಮಸ್ಥರು
ಮಂಡ್ಯ: ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದಲ್ಲಿ ಇತ್ತೀಚಿಗೆ ಚಿರತೆಯೊಂದು ಬೋನಿಗೆ ಬಿದ್ದಿದ್ದು, ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಅತಂಕ ದೂರಾಗಿದೆ.
ಕಳೆದ ಹಲವು ದಿನಗಳಿಂದಲೂ ಚಿರತೆ ಭಯ ಗ್ರಾಮಸ್ಥರನ್ನು ಕಾಡುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಅಧಿಕಾರಿಗಳು ಗ್ರಾಮದ ಸುತ್ತಮುತ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಚಿರತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಗ್ರಾಮದ ಹೊರ ವಲಯದಲ್ಲಿರುವ ಶ್ರೀನಿವಾಸ್ ಅವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಅದನ್ನು ರಕ್ಷಣೆ ಮಾಡಿ ಅರಣ್ಯ ಇಲಾಖಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು.
ಸ್ಥಳಕ್ಕೆ ಧಾವಿಸಿದ ಮೇಲುಕೋಟೆ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಚಿರತೆ ಮರಿಯನ್ನಿಟ್ಟುಕೊಂಡು ತಾಯಿ ಚಿರತೆಯನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದು, ಚಿರತೆ ಬೋನಿನಲ್ಲಿ ಸೆರೆಯಾಗಿದೆ.












Click it and Unblock the Notifications