ಗುಂಡ್ಲುಪೇಟೆ: ರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಗಜರಾಜನ ರಕ್ಷಣೆ
ಚಾಮರಾಜನಗರ, ಸೆಪ್ಟೆಂಬರ್, 01: ಆಹಾರ ಅರಸಿ ಕಾಡಿನಿಂದ ಹೊರಬರುವಾಗ ರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಗಜರಾಜನನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯದ ಮಾವಿನಹಳ್ಳ ಎಂಬಲ್ಲಿ ಇಂದು (ಸೆಪ್ಟೆಂಬರ್ 01) ನಡೆದಿದೆ.
ಅಂದಾಜು 45 ವರ್ಷದ ಗಂಡಾನೆ ಇದಾಗಿದ್ದು, ಎರಡು ಆನೆಗಳು ಆಹಾರಕ್ಕಾಗಿ ರೈಲ್ವೆ ಬ್ಯಾರಿಕೇಡ್ ದಾಟುವಾಗ ಒಂದಾನೆ ಸರಾಗವಾಗಿ ದಾಟಿದರೇ, ಮತ್ತೊಂದು ಆನೆ ಬ್ಯಾರಿಕೇಡ್ ಅಡಿ ಸಿಲುಕಿತ್ತು.

ಆನೆ ಸಿಲುಕಿದ ಮಾಹಿತಿ ಅರಿತ ಮದ್ದೂರು ಆರ್‌ಎಫ್‌ಒ ಪುನೀತ್ ಹಾಗೂ ತಂಡ ಅರ್ಧ ತಾಸು ಕಾರ್ಯಾಚರಣೆ ನಡೆಸಿ ರೈಲ್ವೆ ಬ್ಯಾರಿಕೇಡ್ ಅನ್ನು ಸಡಿಲಗೊಳಿಸಿ ಆನೆಯು ಹೊರಬರುವಂತೆ ಮಾಡಿ ಬಚಾವ್ ಮಾಡಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮತ್ತು ಉಳಿಸುವುದು ನಮ್ಮ ಜವಾಬ್ದಾರಿ, ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.
ಎರಡು ಕಾಡಾನೆಗಳ ಕಳೇಬರಗಳು ಪತ್ತೆ: ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯ ಮತ್ತು ಯಳಂದೂರು ವನ್ಯಜೀವಿ ವಲಯ ವಿಭಾಗದಲ್ಲಿ 2 ಕಾಡಾನೆಗಳ ಕಳೇಬರಗಳು ಪತ್ತೆಯಾಗಿದೆ. ಹಾಗಾದರೆ ಈ ಆನೆಗಳ ವಯಸ್ಸು ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೈಲೂರು ವಲಯದ ಆಳದ ಕೆರೆ ಬಳಿ 45-50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದ್ದು, 7-8 ತಿಂಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇನ್ನು ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, ಇದು 20 ದಿನಗಳ ಹಿಂದೆ ಮೃತಪಟ್ಟಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಈ ಎರಡು ಆನೆಗಳ ದಂತಗಳು ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದೆ.
ಇನ್ನು ಆನೆ ಕಳೇಬರ ಪತ್ತೆ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಕಿಡಿಕಾರಿದ್ದು, ಒಂದಾನೆ ಮೃತಪಟ್ಟು 7-8 ತಿಂಗಳು, ಮತ್ತೊಂದು ಆನೆ ಸತ್ತು 20 ದಿನಗಳಾಗಿವೆ. ಇದು ಅರಣ್ಯ ಇಲಾಖೆಯ ಗಸ್ತಿನ ವೈಖರಿ ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications