ಚಾಮರಾಜನಗರ: ಪಾಪದ ಜಿಂಕೆಯ ರಕ್ತ ಹೀರಿ ಕೊಂದು ಬಿಸಾಡಿದ ವ್ಯಾಘ್ರ
ಚಾಮರಾಜನಗರ, ಮೇ, 30: ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಪ್ರಾಣಿಗಳ ರಸ್ತೆಗಿಳಿಯುವುದು ಹೆಚ್ಚಾಗಿಬಿಟ್ಟಿದೆ. ಅಷ್ಟೇ ಅಲ್ಲದೆ, ಕಾಳಗಕ್ಕೆ ಇಳಿದಿರುವ ಘಟನೆಗಳು ಸಹ ನಡೆದಿವೆ. ಹಾಗೆಯೇ ಇದೀಗ ಇಂದು (ಮೇ 30) ಬೆಳ್ಳಂಬೆಳಗ್ಗೆ ಎರಡು ಪ್ರಾಣಿಗಳ ನಡುವೆ ಕಾಳಗ ನಡೆದಿದ್ದು, ಈ ವೇಳೆ ಪಾಪದ ಪ್ರಾಣಿಯೊಂದು ಮೃತಪಟ್ಟ ಘಟನೆ ಪಡಗೂರು-ಕಲ್ಲಹಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.
ಹುಲಿ ದಾಳಿ ನಡೆಸಿ ಜಿಂಕೆಯೊಂದನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪಡಗೂರು-ಕಲ್ಲಹಳ್ಳಿ ಮಾರ್ಗ ಮಧ್ಯದ ಜಮೀನೊಂದರಲ್ಲಿ ಗುರುವಾರ (ಮೇ 30) ಬೆಳಗ್ಗೆ ನಡೆದಿದೆ.

ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಗ್ಗೆ ಮೇವು ಮೇಯುತ್ತಿದ್ದ ಜಿಂಕೆಯ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ. ಈ ವೇಳೆ ರೈತರು ಕೂಗಿಕೊಂಡ ಪರಿಣಾಮ ಜಿಂಕೆ ಬಿಟ್ಟು ಓಡಿ ಹೋಗಿದೆ. ನಂತರ ಜಿಂಕೆಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಕೆಲಕಾಲ ಒದ್ದಾಡಿ ಸಾವನ್ನಪ್ಪಿದೆ ಎಂದು ಸ್ಥಳೀಯ ರೈತರು ಮಾಹಿತಿ ನೀಡಿದರು. ಅಲ್ಲದೆ, ಜಿಂಕೆ ಒದ್ದಾಟದ ವೀಡಿಯೋವನ್ನು ರೈತರು ಸೆರೆ ಹಿಡಿದು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.
ಜಿಂಕೆ ಮೇಲೆ ಬೀದಿ ನಾಯಿಗಳ ದಾಳಿ: ದಾರಿ ತಪ್ಪಿ ಕಾಡಿನಿಂದ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳ ದಾಳಿಯಿಂದ ಗ್ರಾಮಸ್ಥರು ಬಿಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗ್ರಾಮದಲ್ಲಿ ಆಹಾರ ಹರಸಿ ದಾರಿತಪ್ಪಿ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಸುತ್ತುವರಿದು ಕಚ್ಚಿ ಗಾಯಗೊಳಿಸಿದ್ದವು. ಇದನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಚದುರಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದು, ನಂತರ ಅದನ್ನು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಜಿಂಕೆಯನ್ನು ಜೀಪಿನಲ್ಲಿ ಕೊಂಡೊಯ್ದು ಗಾಯಕ್ಕೆ ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications