ಬಿಳಿಗಿರಿರಂಗನಿಗೆ ವಿದೇಶಿ ಭಕ್ತರು: ದೇವಾಲಯದ ಹುಂಡಿಯಲ್ಲಿ ಡಾಲರ್,ನೇಪಾಳ ಕರೆನ್ಸಿ ಪತ್ತೆ
ಬಿಳಿಗಿರಿರಂಗನಾಥ ದೇವಸ್ಥಾನಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ದೇವಾಲಯದ ಹುಂಡಿಯಲ್ಲಿ 41 ಅಮೆರಿಕನ್ ಡಾಲರ್, ನೇಪಾಳದ ನೋಟುಗಳು ಪತ್ತೆಯಾಗಿದೆ.
ಚಾಮರಾಜನಗರ, ಫೆಬ್ರವರಿ 8: ರಾಜ್ಯದ ಪ್ರಮುಖ ಪ್ರವಾಸಿತಾಣ ಹಾಗೂ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇಗುಲದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 3 ತಿಂಗಳಿನಲ್ಲಿ 8.10 ಲಕ್ಷ ರೂಪಾಯಿ ಸಂಗ್ರಹಗೊಂಡಿದೆ.
ವಿದೇಶಿ ಪ್ರವಾಸಿಗರು ಕೂಡ ಇಲ್ಲಿ ಭೇಟಿ ನೀಡಲಿರುವುದರಿಂದ ಅವರ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಸಿಗಲಿದ್ದು ಇದು ಈ ಬಾರಿಯೂ ಮುಂದುವರೆದಿದೆ. 41 ಅಮೆರಿಕನ್ ಡಾಲರ್, ನೇಪಾಳದ ನೋಟುಗಳನ್ನು ವಿದೇಶಿಗರು ಅರ್ಪಿಸಿದ್ದಾರೆ. ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿ ತೊಟ್ಟಿಲು, ಶಂಖ ಪತ್ತೆಯಾಗಿದ್ದು ಈ ಬಾರಿ ಇವುಗಳ ಲೆಕ್ಕ ಮಾಡದೇ ಹುಂಡಿಯಲ್ಲೇ ಹಾಕಲಾಗಿದೆ.
ಬಿಳಿಗಿರಿರಂಗನ ಬೆಟ್ಟವು ಆಕರ್ಷಣೀಯವಾಗಿದ್ದು ನೋಡುಗರನ್ನು ಕೈಬೀಸಿ ಕರೆಯುತ್ತದೆ. ಹೀಗಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ಬರುವ ಪ್ರವಾಸಿಗರು ಬಿಳಿಗಿರಿರಂಗನಾಥ ದೇವಾಲಯಕ್ಕೆ ಭೇಟಿ ನೀಡಿ ಹರಕೆ ಹಾಗೂ ಕಾಣಿಕೆಯನ್ನು ಸಲ್ಲಿಸುತ್ತಾರೆ. ಇನ್ನು ಬಿಳಿಗಿರಿರಂಗನ ಬೆಟ್ಟವು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದಲ್ಲಿರುವ ಕಾರಣ ತಪ್ಪಲಿನಲ್ಲಿ ಕುರುಚಲು ಕಾಡು, ಒಣ ಎಲೆ ಉದುರುವ ಕಾಡು, ತೇವಾಂಶ ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ, ಶೋಲಾ ಕಾಡು ಹಾಗೂ ಹುಲ್ಲುಗಾವಲಿರುವ ಅನನ್ಯ ಭೌಗೋಳಿಕ ಪರಿಸರ ಹೊಂದಿರುವ ಕಾರಣ ಜೈವಿಕ ವೈವಿಧ್ಯತೆ ಈ ಅರಣ್ಯದಲ್ಲಿದೆ.

ಗ್ರಾಮ ಪಂಚಾಯತ್ ಮುಂದೆ ಕಸ ಸುರಿದ ಗ್ರಾಮಸ್ಥರು
ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಸ್ಪಚ್ಛತೆ ತಾಂಡವವಾಡುತ್ತಿದೆ. ಹೀಗಿದ್ದರೂ ಸಹ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಆಡಳಿತ ವರ್ಗದವರು ಸ್ವಚ್ಛತೆಗೆ ಮುಂದಾಗದಿರುವುದರಿಂದ ಬೇಸತ್ತ ರೈತ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕಚೇರಿಗೆ ಕಸ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ಕೋಟೆಕೆರೆ ಗ್ರಾಪಂ ಕಚೇರಿಗೆ ಎತ್ತಿನಗಾಡಿ ಮೂಲಕ ಕಸ ತುಂಬಿಕೊಂಡು ಆಗಮಿಸಿದ ರೈತ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಕಚೇರಿಗೆ ಕಸ ಸುರಿದು ಪಿಡಿಓ ಹಾಗೂ ಗ್ರಾಪಂ ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮಹದೇವನಾಯಕ ಮಾತನಾಡಿ, "ವರ್ಷದಿಂದಲೂ ಗ್ರಾಪಂ ವ್ಯಾಪ್ತಿಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಚರಂಡಿಯಲ್ಲಿ ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಹಲವು ಬಾರಿ ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ವರ್ಗದವರಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜವಾಗಿಲ್ಲ. ಇದರಿಂದ ಬೇಸತ್ತು ಇದೀಗ ಗ್ರಾಮಸ್ಥರೊಡಗೂಡಿ ಗ್ರಾಪಂ ಕಚೇರಿಗೆ ಕಸ ತಂದು ಸುರಿಯಲಾಗಿದೆ. ಇನ್ನಾದರೂ ಜಡ್ಡು ಗಟ್ಟಿರುವ ಆಡಳಿತ ಚುರುಕಾದಲಿ ಎಂದು ಆಕ್ರೋಶ ಹೊರಹಾಕಿ, ಗ್ರಾಪಂ ಸದಸ್ಯರನ್ನು ಇಲ್ಲಿಗೆ ಕರೆಯಿಸಬೇಕು" ಎಂದು ಪಿಡಿಒ ಶಾಂತರಾಜುರನ್ನು ಆಗ್ರಹಿಸಿದರು.
ಪಿಡಿಒ ಶಾಂತರಾಜು ಮಾತನಾಡ ನಿಮ್ಮ ಬೇಡಿಕೆಯಂತೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದಾಗ ಕೇಳದ ರೈತಸಂಘದ ಕಾರ್ಯಕರ್ತರು ಗ್ರಾಪಂ ಸದಸ್ಯರು ಕರೆಸಬೇಕು ಎಂದು ಪಟ್ಟು ಹಿಡಿದರು. ಗ್ರಾಪಂ ಸದಸ್ಯರ ಬರಲಿ, ಬಿಡಲಿ ನಿಮ್ಮ ಸಮಸ್ಯೆಗೆ ಇಂದೇ ಸ್ಪಂದಿಸುವೆ ದಯವಿಟ್ಟು ಪ್ರತಿಭಟನೆ ಕೈ ಬಿಡಬೇಕು ಎಂದು ಮನವಿ ಮಾಡಿದಾಗ ಪ್ರತಿಭಟನೆ ಕೈ ಬಿಟ್ಟರು. ನಂತರ ಗ್ರಾಮ ಪಂಚಾಯತ್ ಕಚೇರಿಗೆ ಹಾಕಿದ್ದ ಕಸ ಹಾಗೂ ಗ್ರಾಮದೊಳಗಿನ ಕಸ ತೆರವುಗೊಂಡಿದೆ.












Click it and Unblock the Notifications