ಗುಂಡ್ಲುಪೇಟೆ: ದಾಖಲೆ ಇಲ್ಲದ ₹4,04,000 ಹಣ ವಶ
ಚಾಮರಾಜನಗರ, ಮಾರ್ಚ್, 29: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷದ ನಾಲ್ಕು ಸಾವಿರ ಹಣವನ್ನು ಗುಂಡ್ಲುಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮದ್ದೂರು ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುವ ವೇಳೆ ದಾಖಲೆ ರಹಿತ ನಗದನ್ನ ವಶಪಡಿಸಿಕೊಳ್ಳಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಪೊಲೀಸರು ಚುರುಕಿನ ತಪಾಸಣೆ ಕೈಗೊಂಡಿದ್ದರು. ಇನ್ನು ಇಂದು ಬೆಳೆಗ್ಗೆ ಮದ್ದೂರು ಚೆಕ್ಪೋಸ್ಟ್‌ನಲ್ಲಿ ದಾಖಲೆ ರಹಿತವಾಗಿ ಸಾಗಿಸಲಾಗುತ್ತಿದ್ದ 4 ಲಕ್ಷದ ನಾಲ್ಕು ಸಾವಿರ ಹಣವನ್ನ ಗುಂಡ್ಲುಪೇಟೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಪಿಐ ಪರಶಿವಮೂರ್ತಿ ನೇತೃತ್ವದಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಅಕ್ರಮಗಳಿಗೆ ಬ್ರೇಕ್ ಹಾಕಲಾಗುತ್ತಿದೆ.

₹4,00,00,000ಗೂ ಅಧಿಕ ಮೌಲ್ಯದ ಚಿನ್ನಾಭರಣ ವಶ: ಲೋಕಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ವೇಳೆ ಅಕ್ರಮವಾಗಿ ಹಣ ಸಾಗಿಸುತ್ತಾರಂತಲೇ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ನಿಗಾವಹಿಸಿದ್ದಾರೆ. ಇನ್ನು ಮಾರ್ಚ್ 26ರಂದು ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, 1.873 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ MC ಹಳ್ಳಿ ಚೆಕ್ ಪೋಸ್ಟ್ ಬಳಿಯ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಖಲೆಯಿಲ್ಲದ ಬರೋಬ್ಬರಿ 6.5 ಕೆ.ಜಿ ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದ್ದು, ಇದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಪರಿಶೀಲನೆ ವೇಳೆ ದಾಖಲೆ ನೀಡದ ಹಿನ್ನೆಲೆ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ತೆರಿಗೆ ಇಲಾಖೆಗೆ ತನಿಖೆಗೆ ಹಸ್ತಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗಿತ್ತು.
₹3,00,000 ಲಕ್ಷಕ್ಕೂ ಅಧಿಕ ಹಣ ವಶ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೊಸ್ಟ್‌ನಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆ ತಾಲೂಕಿನ ಕೇರಳ ಹಾಗೂ ತಮಿಳುನಾಡು ಗಡಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ವೇಳೆ ದಾಖಲೆ ಇಲ್ಲದ 3 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಮಧ್ಯೆ ಗುರುವಾರ ಖುದ್ದು ತಪಾಸಣೆಗೆ ಇಳಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮತ್ತು ತಂಡ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಈಚರ್ ವಾಹನ ಚಾಲಕ ಹ್ಯಾರಿಸ್‌ನಿಂದ 97,000 ರೂಪಾಯಿ, ಪಿಕ್ ಅಪ್ ಚಾಲಕ ಜಂಶೀರ್ ನಿಂದ 1,17 ಲಕ್ಷ ರೂಪಾಯಿ ಹಾಗೂ ಕಾರು ಚಾಲಕ ಜೋಶ್ ಕೈನಾಂಡಿ ಅವರಿಂದ 1 ಲಕ್ಷ ರೂಪಾಯಿ ಸೇರಿ ಒಟ್ಟು 3.14 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ತಮಿಳುನಾಡಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದು, ವಾಹನ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ.












Click it and Unblock the Notifications