ಮೂಲಸೌಕರ್ಯ ಕೊರತೆ: ಚಾಮರಾಜನಗರದಲ್ಲಿ ಬಾಗಿಲು ಮುಚ್ಚಿದ 13 ಸರ್ಕಾರಿ ಶಾಲೆಗಳು
ಚಾಮರಾಜನಗರ, ಆಗಸ್ಟ್ 17: ಮೂಲಸೌಕರ್ಯ ಕೊರತೆಯಿಂದಾಗಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಒಟ್ಟು 13 ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಲಾಗಿದೆ.
2023-24 ನೇ ಶೈಕ್ಷಣಿಕ ಸಾಲಿನಲ್ಲಿ ಮೂಲಸೌಕರ್ಯ ಕೊರತೆ, ಶಿಥಿಲವಾದ ಕಟ್ಟಡಗಳಿಂದಾಗಿ ಶೂನ್ಯ ದಾಖಲಾತಿ ಉಂಟಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 13 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿದ್ದು, ಇದರಲ್ಲಿ ಉರ್ದು ಮಾಧ್ಯಮದ ಶಾಲೆಯೂ ಸೇರಿದೆ.

ತಮಿಳುನಾಡು ಹಾಗೂ ಕೇರಳ ಎರಡು ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಸಿಗಬೇಕಾದ ಉತ್ತೇಜನ ಸಿಗದಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ. ಕೊರೊನಾ ಲಾಕ್‌ಡೌನ್ ವೇಳೆ ಖಾಸಗಿ ಶಾಲೆಗಳಿಗೆ ಹೆಚ್ಚು ಶುಲ್ಕ ಭರಿಸಲಾಗದೆ ಖಾಸಗಿ ಶಾಲೆಗಳಿಂದ ದಾಖಲೆ ಮಟ್ಟದಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರು. ಈಗ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಸರ್ಕಾರಿ ಶಾಲೆಗಳ ಮೂಲಸೌಕರ್ಯ ಕೊರತೆಯಿಂದ ಬೇಸತ್ತು 13 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ.
ಇನ್ನು, ಈ ಸಂಬಂಧ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಪ್ರತಿಕ್ರಿಯೆ ನೀಡಿದ್ದು, 'ಶೂನ್ಯ ದಾಖಲಾತಿ ಆಗಿರುವುದರಿಂದ 13 ಸರ್ಕಾರಿ ಶಾಲೆಗಳು ಬಂದ್ ಆಗಿದೆ. ಸಿಆರ್‌ಎಸ್ ಅನುದಾನ ಬಳಸಿಕೊಂಡು ಶಾಲಾಭಿವೃದ್ಧಿ ಜೊತೆಗೆ ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ತಿಳಿಸಿದ್ದಾರೆ.
ರಾಜ್ಯದ್ಯಂತ ಸರ್ಕಾರಿ ಶಾಲೆ ಉಳಿಸುವ ಬಗ್ಗೆ ಹೋರಾಟಗಳು ನಡೆಯುತ್ತಲೇ ಇದೆ. ಆದರೂ ಕೂಡ ವಿವಿಧ ಜಿಲ್ಲೆಗಳಲ್ಲಿ ಹತ್ತಾರು ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಾಗಿಲು ಮುಚ್ಚುತ್ತಿದ್ದು ಈ ವಿಚಾರವನ್ನು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.
ಇದೀಗ ತಮಿಳುನಾಡು ಹಾಗೂ ಕೇರಳ ಎರಡು ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸಾಲು ಸಾಲು ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದೆ. ಈ ಕೂಡಲೇ ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಿ ಶಾಲೆಗಳಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯವನ್ನು ಒದಗಿಸಬೇಕಾಗಿದೆ. ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ನೀಡಿ ಸರ್ಕಾರ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಸ್ಥಳೀಯ ವಿದ್ಯಾರ್ಥಿಗಳು ಶಾಲೆಗಳತ್ತ ಬರುವಂತ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications