ಬಿಆರ್ ಶೆಟ್ಟಿ Finablr ನಲ್ಲಿ ಯಾರ ಯಾರ ಪಾಲು ಎಷ್ಟಿದೆ?
ಅನಿವಾಸಿ ಭಾರತೀಯ ಉದ್ಯಮಿ ಬಿ. ರಘುರಾಮ್ ಶೆಟ್ಟಿ ಅವರು ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರನಡೆದು ಆರು ತಿಂಗಳುಗಳ ಮೇಲಾಗಿದೆ. ಆದರೆ, ಸಂಕಷ್ಟಗಳು ಮಾತ್ರ ಎಂದಿನಂತೆ ಮುಂದುವರೆದಿವೆ. ಬಿಲಿಯನೇರ್ ಬಿಆರ್ ಶೆಟ್ಟಿ ಅವರ ಎನ್ಎಂಸಿ ಸೇರಿದಂತೆ ಹಲವು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ, ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಎಇ ಸರ್ಕಾರ ಪ್ರಕಟಿಸಿದೆ.
ಎನ್ಎಂಸಿಗೆ ಹಣಕಾಸು ಒದಗಿಸುತ್ತಿದ್ದ ಫಿನಾಬ್ಲರ್ ಪಬ್ಲಿಕ್ ಲಿಮಿಟೆಡ್ ಕಂಪನಿ ಇಂದು ಸೇಲ್ ಆಗಿದೆ. ಇಸ್ರೇಲಿ ಮತ್ತು ಯುಎಇ ಒಕ್ಕೂಟಕ್ಕೆ ಕೇವಲ 1 ಅಮೆರಿಕನ್ ಡಾಲರ್(ಭಾರತೀಯ ರುಪಾಯಿ ಮೌಲ್ಯ 74ರು)ಗೆ ಮಾರಾಟವಾಗಿದೆ. ಕಳೆದ ಡಿಸೆಂಬರ್‌ನಲ್ಲಿ 1.5 ಬಿಲಿಯನ್ ಪೌಂಡ್‌ಗಳ (2 ಬಿಲಿಯನ್ ಡಾಲರ್) ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿದ್ದ ಫಿನಾಬ್ಲರ್ ಪಿಎಲ್ ಸಿಯನ್ನು ಈಗಾಗಲೇ ಲಂಡನ್ ಷೇರುಪೇಟೆ ಅಮಾನತಿನಟ್ಟಿದೆ.
77 ಹರೆಯದ ಉದ್ಯಮಿ ಬಿಆರ್ ಶೆಟ್ಟಿ ಈಗ ಸಾಲು ಸಾಲು ಹೊಡೆತಗಳನ್ನು ಎದುರಿಸುವಂತಾಗಿದೆ. ಬಿಆರ್ ಶೆಟ್ಟಿ ಮತ್ತು ಅವರ ಕುಟುಂಬದವರು ಮತ್ತು ಅವರೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಯುಎಇಯ ಕೇಂದ್ರೀಯ ಬ್ಯಾಂಕ್ (ಸಿಬಿಯುಎಇ) ತಡೆ ಹಿಡಿದಿದೆ. ಶೆಟ್ಟಿ ಅವರಿಗೆ ಸಂಬಂಧಿಸಿದ ಅನೇಕ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

ಶೆಟ್ಟಿ ಅವರು ಆರಂಭಿಸಿದ ಮೊದಲ ಕಂಪೆನಿ ಎನ್ ಎಂಸಿ ಹೆಲ್ತ್
ಬಿಆರ್ ಶೆಟ್ಟರು ಆರಂಭಿಸಿದ ಮೊದಲ ಕಂಪೆನಿ ಎನ್ ಎಂಸಿ ಹೆಲ್ತ್. ಲೆಕ್ಕಪತ್ರಗಳಲ್ಲಿ ಸುಳ್ಳು ಮಾಹಿತಿ, ವಂಚನೆ ಆರೋಪಗಳನ್ನು ಎದುರಿಸಬೇಕಾಯಿತು. ಖಾಸಗಿ ಸಂಸ್ಥೆಯೊಂದರ ತನಿಖೆ ಪ್ರಕಾರ, ಕಂಪೆನಿಯ ಸಾಲ 2019ರಲ್ಲಿ 450 ಕೋಟಿ ಅಮೆರಿಕನ್ ಡಾಲರ್ ಇತ್ತು. ಆಡಳಿತ ಮಂಡಳಿಯ ಗಮನಕ್ಕೇ ತರದೆ 10 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಚೆಕ್ ವಿತರಿಸಿತ್ತು ಶೆಟ್ಟರಿಗೆ ಸೇರಿದ ಹಣಕಾಸು ಸೇವೆಯ Finablr. ಆ ಎರಡೂ ಕಂಪೆನಿಯ ಮೇಲಧಿಕಾರಿಗಳು ರಾಜೀನಾಮೆ ನೀಡಿದರು ಅಥವಾ ತೆಗೆಯಲಾಯಿತು. ಎರಡೂ ಕಂಪೆನಿಗಳ ಷೇರು ವ್ಯವಹಾರಗಳನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಿಂದ ಅಮಾನತು ಮಾಡಲಾಯಿತು.

ಷೇರುಗಳನ್ನು ಬ್ಯಾಂಕ್‌ಗಳಲ್ಲಿ ಅಡ ಇಡಲಾಗಿತ್ತು
ಸಾಲ ಪಡೆಯುವ ಸಲುವಾಗಿ ಎನ್‌ಎಂಸಿ ಹೆಲ್ತ್ ಸಂಸ್ಥೆಯ ಷೇರುಗಳನ್ನು ಬ್ಯಾಂಕ್‌ಗಳಲ್ಲಿ ಅಡ ಇಡಲಾಗಿದ್ದು, ಈ ವಿಚಾರವನ್ನು ಮುಚ್ಚಿಡಲಾಗಿದೆ ಎಂದು ವರದಿ ಆಧಾರದ ಮೇಲೆ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಈ ಕ್ರಮ ಕೈಗೊಂಡಿತ್ತು. ಈ ಬೆಳವಣಿಗೆಗಳಿಂದಾಗಿ 2019ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಎಂಎನ್‌ಸಿ ಹೆಲ್ತ್‌ನ ಷೇರುಗಳ ದರದಲ್ಲಿ ಭಾರೀ ಕುಸಿತ ಕಂಡಿದೆ.

ಒಂದು ವರ್ಷದಲ್ಲಿ ಎಲ್ಲವೂ ಅದಲು ಬದಲು
ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತವಾದ ಬಳಿಕ, ಷೇರುದಾರರು ತಿರುಗಿಬಿದ್ದಿದ್ದರು. ಆ ಬಳಿಕ ಎಂಎನ್‌ಸಿ ಹೆಲ್ತ್‌ಕೇರ್ ಅಧ್ಯಕ್ಷ ಸ್ಥಾನಕ್ಕೆ ಶೆಟ್ಟಿ ರಾಜೀನಾಮೆ ನೀಡಿದ್ದರು. ಅವರು ಮಾತ್ರವಲ್ಲದೆ ಎನ್‌ಎಂಸಿಯ ಉಪಾಧ್ಯಕ್ಷ ಖಲೀಫಾ ಬುಟ್ಟಿ ಮತ್ತು ಇತರ ನಾಲ್ವರು ಮಂಡಳಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದರು. ಕೊನೆಗೆ ಎಂಎನ್‌ಸಿ ಹೆಲ್ತ್ ಪೂರ್ಣ ಕುಸಿತ ಕಂಡಿದೆ. ಕೊನೆಗೆ ಹಣಕಾಸು ಒದಗಿಸಿದ ಫಿನಾಬ್ಲರ್ ಕೂಡಾ ಅಲ್ಪಮೊತ್ತಕ್ಕೆ ಪರಭಾರೆಯಾಗಿದೆ.

ಫಿನಾಬ್ಲರ್ PLCಯಲ್ಲಿ ಯಾರ ಯಾರ ಪಾಲು
2018ರಲ್ಲಿ ಆರಂಭವಾದ ಫಿನಾಬ್ಲರ್ ಪಬ್ಲಿಕ್ ಲಿಮಿಟೆಡ್ ಕಂಪನಿಯಲ್ಲಿಅನಿವಾಸಿ ಭಾರತೀಯ ಉದ್ಯಮಿ ಡಾ ಬಿ. ರಘುರಾಮ್ ಶೆಟ್ಟಿ ಶೇ 64.2ರಷ್ಟು ಪಾಲು ಹೊಂದಿದ್ದಾರೆ. ಬಿನಾಯ್ ಶೆಟ್ಟಿ 3%. ಯುಎಕ್ಸ್ ಇನ್ವೆಸ್ಟ್ ಮೆಂಟ್ ಹೋಲ್ಡಿಂಗ್ ಲಿಮಿಟೆಡ್ 6.8%, ಬ್ರೋಕರೇಜ್ ಹೌಸ್ ಸೆಕ್ಯುರಿಟೀಸ್ 4.9% ಹಾಗೂ ತೆಜೆರಾ ಕ್ಯಾಪಿಟಲ್ 3.8% ಹೊಂದಿವೆ. ಜನವರಿಯಲ್ಲಿ ಯುಎಕ್ಸ್ ಇನ್ವೆಸ್ಟ್ ಮೆಂಟ್ ಹೋಲ್ಡಿಂಗ್ 6% ಮಾರಾಟ ಮಾಡಿ, ಮಿಕ್ಕ ಭಾಗವನ್ನು ಅಡ ಇಟ್ಟಿತ್ತು. ಯುಎಇ ಎಕ್ಸ್ ಚೇಂಜ್ ಹಾಗೂ ಟ್ರಾವೆಲೆಕ್ಸ್ ನಲ್ಲಿ ಹೂಡಿಕೆ ಮಾಡಲಾಗಿತ್ತು. ಟ್ರಾವೆಲೆಕ್ಸ್ ನ ಫ್ರೆಂಚ್ ವಿಭಾಗವು ಯುರೋಪಿಯನ್ ಬ್ಯಾಂಕಿಂಗ್ ಲೈಸನ್ಸ್ ಕೂಡಾ ಹೊಂದಿತ್ತು.
ಮೈಕಲ್ ಟೊಮ್ಲಿನ್, ಭೈರವ್ ತ್ರಿವೇದಿ, ಮೆಹುಲ್ ದೇಸಾಯ್, ಜೋ ಹರ್ಲಿ ಪ್ರಮುಖ ಆಡಳಿತ ಅಧಿಕಾರಿಗಳು

ಫಿನಾಬ್ಲರ್ ಅನೇಕ ಸಬ್ಸಿಡಿ ಸಂಸ್ಥೆ ಹೊಂದಿದೆ
2018ರಲ್ಲಿ ಬಿ. ಆರ್ ಶೆಟ್ಟಿ ಸ್ಥಾಪಿಸಿದ ಸಂಸ್ಥೆ ಪೇಮೆಂಟ್ ತಂತ್ರಜ್ಞಾನ, ವಿದೇಶಿ ಕರೆನ್ಸಿ ವಿನಿಮಯ, ಅಂತರ್ ಗಡಿ ಪೇಮೆಂಟ್ ಸೇವೆ ಒದಗಿಸುತ್ತಿತ್ತು. 2018ರಲ್ಲಿ 1,434 ಮಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. 18, 201ಕ್ಕೂ ಅಧಿಕ ಉದ್ಯೋಗಳನ್ನು ಹೊಂದಿತ್ತು.
ಟ್ರಾವೆಲೆಕ್ಸ್, ಯುಎಇ ಎಕ್ಸ್ ಚೇಂಜ್, ಎಕ್ಸ್ ಪ್ರೆಸ್ ಮನಿ, ಟೈಮ್ಸ್ ಆಫ್ ಮನಿ, ರೆಮಿಟ್ 2 ಇಂಡಿಯಾ, ಬಯಾನ್ ಪೇ, ಯುನಿಮೊನಿ, ಪೆಆಸ್, ಸ್ವಾಚ್, ನ್ಯೂವೊ, ಡಿಟ್ಟೋ ಸಬ್ಸಿಡಿ ಸಂಸ್ಥೆಗಳು












Click it and Unblock the Notifications