ಅದಾನಿ ಗ್ರೂಪ್‌ನೊಂದಿಗೆ ಕೈಜೋಡಿಸಿದ ವೀಸಾ: 40 ಕೋಟಿ ಗ್ರಾಹಕರು ಟಾರ್ಗೆಟ್- ಏನಿದು ಒಪ್ಪಂದ?
ಮುಂಬೈ, ಜುಲೈ 26: ಭಾರತದ ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್‌ನೊಂದಿಗೆ ನ್ಯೂ ಕೊ-ಬ್ರ್ಯಾಂಡ್ ಕ್ರೆಡಿಟ್-ಕಾರ್ಡ್ ಒಪ್ಪಂದಗಳನ್ನು ವೀಸಾ ಮಾಡಿಕೊಂಡಿದೆ. ಈ ಪಾಲುದಾರಿಕೆಯು ಅದಾನಿ ವಿಮಾನ ನಿಲ್ದಾಣಗಳು ಮತ್ತು ಆನ್‌ಲೈನ್ ಪ್ರಯಾಣ ಸೇವೆಗಳನ್ನು ಒಳಗೊಂಡಿದೆ. 40 ಕೋಟಿ (400 ಮಿಲಿಯನ್) ಗ್ರಾಹಕರನ್ನು ತಲುಪುವ ಗುರಿಯನ್ನು ಈ ಮಹತ್ವದ ಒಪ್ಪಂದ ಹೊಂದಿದೆ.
ಈ ಒಪ್ಪಂದವು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲಿದೆ ಎಂದು ವೀಸಾದ ಸಿಇಒ ರಯಾನ್ ಮ್ಯಾಕ್‌ನೆರ್ನಿ ಹೇಳಿದ್ದಾರೆ. ಹೆಚ್ಚುವರಿಯಾಗಿ, ವೀಸಾ ಕಂಪನಿಯು ಬ್ರೀಜ್ ಏವಿಯೇಷನ್ ಗ್ರೂಪ್ ಮತ್ತು ಅಲೆಜಿಯಂಟ್ ಟ್ರಾವೆಲ್ ಕಂ ಜೊತೆ ಒಪ್ಪಂದ ಮಾಡಿಕೊಂಡಿದೆ.

ಇದೇ ಸಮಯದಲ್ಲಿ ಉತ್ತಮ ಪ್ರಯಾಣ ಮತ್ತು ಆಹಾರದ ಕುರಿತ ಗ್ರಾಹಕರ ಬೇಡಿಕೆಯನ್ನು ವೀಸಾ ಪೂರೈಸಿದೆ. ವೀಸಾ ಕಾರ್ಡ್ ವೆಚ್ಚದಲ್ಲಿ ನಿರೀಕ್ಷೆಗಿಂತ ಉತ್ತಮ ಸೌಲಭ್ಯವನ್ನು ನೀಡಲಾಗಿದೆ. ಇದು ವೀಸಾದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಮ್ಯಾಕ್‌ನೆರ್ನಿ ತಿಳಿಸಿದ್ದಾರೆ.
ಜೂನ್ 30 ರಂದು ಕೊನೆಗೊಳ್ಳುವ ಮೂರನೇ ಹಣಕಾಸು ತ್ರೈಮಾಸಿಕದಲ್ಲಿ 3.17 ಟ್ರಿಲಿಯನ್ ಡಾಲರ್ ಪಾವತಿಗಳನ್ನು ವೀಸಾ ಮಾಡಿಕೊಂಡಿದೆ. ಇದರಿಂದ ಕಂಪನಿ ಲಾಭದಲ್ಲಿ ಶೇ 9ರಷ್ಟು ಹೆಚ್ಚಳವನ್ನು ಕಂಡಿದೆ. ಬ್ಲೂಮ್‌ಬರ್ಗ್ ಸಮೀಕ್ಷೆಯು ಸರಾಸರಿ 3.14 ಟ್ರಿಲಿಯನ್ ಡಾಲರ್ ಅನ್ನು ಅಂದಾಜು ಮಾಡಿತ್ತು. ವೀಸಾ ಈ ಅಂದಾಜನ್ನು ಮೀರಿಸಿದೆ ಎಂದು ಹೇಳಿದ್ದಾರೆ.

ವೀಸಾ ಮತ್ತು ಅದರ ಪ್ರತಿಸ್ಪರ್ಧಿ ಮಾಸ್ಟರ್‌ಕಾರ್ಡ್ ನಡುವೆ ತೀವ್ರ ಪೈಪೋಟಿ ಇದೆ. ಪ್ರಯಾಣ ಮತ್ತು ಮನರಂಜನೆ ಸೌಲಭ್ಯಗಳಿಗಾಗಿ ಇವೆರಡು ಕಂಪನಿಗಳು ಹೆಸರು ಮಾಡಿವೆ. ಶ್ರೀಮಂತ ಗ್ರಾಹಕರಿಂದ ಹೆಚ್ಚು ಪ್ರಯೋಜನಗಳನ್ನು ಈ ಕಂಪನಿಗಳು ಪಡೆದಿವೆ. ಅಮೆರಿಕದ ಗ್ರಾಹಕರ ವಿಶ್ವಾಸ ಈ ಕಂಪನಿಗಳ ಮೇಲೆ ಹೆಚ್ಚಿದೆ. ಈ ವರ್ಷದ ಜುಲೈನಲ್ಲಿ ಅಮೆರಿಕದ ಗ್ರಾಹಕರು ಈ ಕಂಪನಿಗಳಿಗೆ ಹೆಚ್ಚಿನ ಆದಾಯ ತಂದುಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಜಗತ್ತಿನಾದ್ಯಂತ ಇರುವ ಹಣದುಬ್ಬರದ ಸಮಸ್ಯೆಯ ನಡುವೆಯೂ ವೀಸಾ ಕಂಪನಿ ಅಂದಾಜಿಗಿಂತ ಹೆಚ್ಚು ಲಾಭ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದೇ ರೀತಿಯ ಬೆಳವಣಿಗೆಗಳನ್ನು ಕಂಪನಿ ಕಾಣಲಿದೆ ಎನ್ನುವ ಖಾತ್ರಿ ನನಗಿದೆ ಎಂದು ವೀಸಾದ ಮುಖ್ಯ ಹಣಕಾಸು ಅಧಿಕಾರಿ ವಸಂತ್ ಪ್ರಭು ಹೇಳಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಪ್ರಭು ಅವರು ಡೆಲ್ಟಾ ಏರ್ ಲೈನ್ಸ್ ಇಂಕ್ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಆಗಸ್ಟ್‌ನಲ್ಲಿ ವೀಸಾದಲ್ಲಿರುವ ತಮ್ಮ ಹುದ್ದೆಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ.












Click it and Unblock the Notifications