Vegetables Price in Bengaluru: ದುಬಾರಿ ಬೆಂಗಳೂರು: ತರಕಾರಿ ಬೆಲೆ ಗಗನಕ್ಕೆ- ಬಟಾಣಿ ಬೇಡ ಎನ್ನುತ್ತಿದ್ದಾರೆ ಗ್ರಾಹಕರು
ಬೆಂಗಳೂರು ಮೇ 28: ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬೀನ್ಸ್ ಬಟಾಣಿ ಬೆಲೆ ಗ್ರಾಹಕರ ಕೈ ತಪ್ಪಿ ಹೋಗಿದ್ದು, ಬೆಲೆ ಕೇಳಿದ ಗ್ರಾಹಕರು ಖಾಲಿ ಚೀಲ ಹಿಡಿದುಕೊಂಡು ವಾಪಸ್ ಹೋಗುವಂತಾಗಿದೆ.
ಹೌದು... ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆಯಾದರೂ, ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕಳೆದ ತಿಂಗಳಿನಲ್ಲಿ ಶೂನ್ಯ ಮಳೆ ದಾಖಲಾಗಿತ್ತು. ಇದರಿಂದಾಗಿ ರೈತರು ಬೆಳೆ ಬೆಳೆಯುವುದು ಕಷ್ಟವಾಗಿತ್ತು. ಹೀಗಾಗಿ ತರಕಾರಿ ಬೆಲೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗದೇ ಇದ್ದರೆ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾದರೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಯಾವ ತರಕಾರಿ ಬೆಲೆ ಎಷ್ಟಿದೆ ಎಂದು ತಿಳಿಯೋಣ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆಯಲ್ಲಿ ಏರುಪೇರಾಗುತ್ತಲೇ ಇದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರಿಗೆ ತರಕಾರಿ ಖರೀದಿ ಕಷ್ಟವಾಗಿದೆ. ಬಹುತೇಕ ತರಕಾರಿಗಳ ಬೆಲೆ ಕೆಜಿಗೆ 80 ರೂಪಾಯಿ ಗಡಿ ದಾಟಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಹೆಚ್ಚಾಗಿದ್ದು, ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಅಲ್ಲದೆ ಬೇಡಿಕೆಗೆ ತಕ್ಕಂತ ತರಕಾರಿ ಇಲ್ಲದೇ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹೀಗಾಗಿ ಜನ ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಳೆದ ಬೆಳೆ ಹೆಚ್ಚಿನ ಪ್ರಮಾಣದ ಫಸಲು ನೀಡಿಲ್ಲ. ಕಳೆದ ಒಂದು ವಾರದಿಂದ ಮಾತ್ರ ಧಾರಾಕಾರ ಮಳೆಯಾಗುತ್ತಿದ್ದು ಕಷ್ಟಪಟ್ಟು ಬೆಳೆಸಿದ ಬೆಳೆ ಕೂಡ ನಾಶವಾಗಿ ಹೋಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಹೆಚ್ಚಾಗಿ ಬರುತ್ತಿಲ್ಲ.
ಇರುವ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗಧಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನಗರದ ಮುಖ್ಯ ಮಾರುಕಟ್ಟೆಯಲ್ಲಿ ಅಲ್ಲದೆ ತಳ್ಳೋ ಗಾಡಿ, ಬಡಾವಣೆಗಳು, ಮನೆಗಳು ಬಳಿಯ ತರಕಾರಿ ಅಂಗಡಿಗಳಲ್ಲಿ, ಹಾಪ್ ಕಾಮ್ಸ್‌ಗಗಳಲ್ಲಿಯೂ ಬೆಲೆ ವಿಪರೀತ ಹೆಚ್ಚಾಗಿದೆ.

ಇಂದಿನ ತರಕಾರಿ ಬೆಲೆ ಹೀಗಿದೆ:
ಬಟಾಣಿ:140-180, ಬೆಂಡೆಕಾಯಿ:60-66, ಟೊಮೆಟೋ:30-60, ಆಲೂಗೆಡ್ಡೆ:30-56, ಹಾಗಲಕಾಯಿ:60- 82, ಗೋರಿಕಾಯಿ:50-89, ಹಸಿ ಮೆಣಸಿನಕಾಯಿ:80-106, ಬಿಟ್ರೋಟ್: 40-46, ಈರುಳ್ಳಿ:20-39, ಕ್ಯಾರೇಟ್: 80-82, ಬೀನ್ಸ್:220-220, ನವಿಲುಕೋಸು:60-102, ಬದನೆಕಾಯಿ:60-70, ದಪ್ಪ ಮೆಣಸಿನಕಾಯಿ:40- 65, ಸೋರೆಕಾಯಿ:40-50, ಬೆಳ್ಳುಳ್ಳಿ: 300-338, ಶುಂಠಿ:180-195, ಪಡುವಲಕಾಯಿ: 30-60 ರೂಪಾಯಿ ಇದೆ.
ಹೀಗೆ ಪ್ರತೀ ಬಾರಿ ಹೆಚ್ಚಾಗುತ್ತಿರುವ ತರಕಾರಿ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ಖರೀದಿ ಮಾಡುವ ಗ್ರಾಹಕರು ಅರ್ಧ ಕೆಜಿಗೆ ಸುಮ್ಮನಾಗುತ್ತಿದ್ದಾರೆ. ಇದರಿಂದಾಗಿ ವ್ಯಾಪಾರ ಕೂಡ ಸರಿಯಾಗಿ ಆಗುತ್ತಿಲ್ಲ ಎಂದು ವ್ಯಾಪಾರಸ್ಥರು ತಲೆ ಕೆಡಿಸಿಕೊಂಡಿದ್ದಾರೆ.
ಸೊಪ್ಪು ಬೆಲೆ ಹೀಗಿದೆ...
ತರಕಾರಿ ಬೆಲೆ ಒಂದು ಕಡೆಯಾಗದರೆ ಸೊಪ್ಪಿನ ಬೆಲೆ ಮತ್ತೊಂದು ಕಡೆ. ಸೊಪ್ಪಿನ ಬೆಲೆ ಕೇಳಿದ ಗ್ರಾಹಕರು ಬರಿಗೈಲಿ ವಾಪಾಸ್ಸಾಗುತ್ತಿದ್ದಾರೆ. ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಬರೋಬ್ಬರಿ 100 ರೂಪಾಯಿ ಇದೆ. ಪುದೀನ 30-40 ರೂಪಾಯಿ, ಕರಿಬೇವು 10ರೂಪಾಯಿ, ಮೆಂತೆ ಸೊಪ್ಪು 80 ರೂಪಾಯಿ, ಪಾಲಕ್ 50 ರೂಪಾಯಿಗೆ ಒಂದು ಕಟ್ ಇದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ತರಕಾರಿ ಬೆಲೆ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.












Click it and Unblock the Notifications